ಶ್ರೀನಾರಾಯಣ ಗುರುಗಳ ತತ್ವಾದರ್ಶ ಸದಾ ಸ್ಮರಣೀಯ: ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು
ಉಡುಪಿ: ಶ್ರೀವಿಠೋಭ ಭಜನಾ ಮಂದಿರ, ಬಿಲ್ಲವ ಸಮಾಜ ಸೇವಾ ಸಂಘ ಮಲ್ಪೆ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಅವರ 170ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ನೂತನ ಅಧ್ಯಕ್ಷ, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಗೋಪಾಲ ಸಿ.ಬಂಗೇರ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ಪಾಲ್ ಎ. ಸುವರ್ಣ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಉಪಸ್ಥಿತರಿದ್ದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು, ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರ ಹಾಗೂ ತತ್ವದಲ್ಲಿ ನಂಬಿಕೆಯಿರಿಸಿಕೊoಡು ಸಂಘವನ್ನು ಮುನ್ನಡೆಸಿಕೊಂಡು ಸಮಾಜಮುಖಿ ಕಾರ್ಯಕ್ರಮಗಳ ನ್ನು ನಡೆಸುತ್ತಿರುವ ಸಂಘದ ಅಧ್ಯಕ್ಷ ಗೋಪಾಲ ಸಿ.ಬಂಗೇರ ಅವರ ಸೇವೆಯನ್ನು ಶ್ಲಾಘಿಸಿದರು.
ಕರಾವಳಿಯುದ್ದಕ್ಕೂ ಶ್ರೀ ನಾರಾಯಣ ಗುರುಗಳ ಮಹಿಮೆ ಅವರ ತತ್ವಾದರ್ಶದಲ್ಲಿ ಹುಟ್ಟಿರುವ ಸಂಘಸoಸ್ಥೆಗಳ ಸೇವಾ ಕಾರ್ಯಗಳನ್ನು ಕಾಣುತ್ತಿದ್ದೇವೆ. ಪ್ರಮುಖವಾಗಿ ಶೈಕ್ಷಣಿಕ ಸಾಧನೆಗಾಗಿ ಮಕ್ಕಳನ್ನು ಗುರುತಿಸಿ ಸನ್ಮಾನಿಸಿ ಪುರಸ್ಕರಿಸಿರುವುದು ಸಂತೋಷ ತಂದಿದೆ. ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿದಾಗ ಮಾತ್ರ ಅವರಿಂದ ಉನ್ನತ ಮಟ್ಟಕ್ಕೆ ಏರಲು ಸಾಧ್ಯ ಎಂದರು.
ಮಾನವ ತಾನು ಸಂಪಾದಿಸಿದ ಹಣದಲ್ಲಿ ಒಂದಷ್ಟು ಪಾಲನ್ನು ಸಮಾಜಕ್ಕೆ ಸಮರ್ಪಿಸಬೇಕು ಎನ್ನುವ ತುಡಿತ ನಮ್ಮಲ್ಲಿರಬೇಕು. ನಾನು ಕೂಡಾ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ನ್ನು ಹುಟ್ಟುಹಾಕಿ ಈ ಮೂಲಕ ಸಮಾಜ ಸೇವೆಯಲ್ಲಿ ಕುಟುಂಬ ಸಮೇತ ತೊಡಗಿಸಿಕೊಂಡಿದ್ದೇನೆ. ಅದೇ ರೀತಿ ಗೋಪಾಲ ಬಂಗೇರ ಅವರು ಕೂಡಾ ಕಳೆದ 4-5 ದಶಕಗಳಿಂದ ಶಾಲೆ, ಭಜನಾ ಮಂದಿರ, ಸೇವಾ ಸಂಘಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಅವರು ಪ್ರಶಂಸಿದರು.
ಕಾರ್ಯಕ್ರಮದಲ್ಲಿ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ದಿನೇಶ್ ಜಿ. ಸುವರ್ಣ, ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ರಘುರಾಮ್ ಸುವರ್ಣ, ನಾರಾಯಣ ಗುರು ಸೇವಾದಳದ ಸಂಚಾಲಕ ದೀಪಕ್ ಕೋಟ್ಯಾನ್, ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ವಾರಿಜಾ ಮಧುಸೂದನ್ ಮೊದಲಾದವರು ಉಪಸ್ಥಿತರಿದ್ದರು.