ಆ.24: ಕಂಚಿನಡ್ಕ ಯೋಜಿತ ಟೋಲ್ ಗೇಟ್ ವಿರುದ್ಧ ಬೃಹತ್ ಪ್ರತಿಭಟನೆ
ಉಡುಪಿ: ಪಡುಬಿದ್ರಿ- ಕಾರ್ಕಳ ರಾಜ್ಯ ಹೆದ್ದಾರಿ ಕಂಚಿನಡ್ಕದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಟೋಲ್ ಗೇಟ್ ವಿರುದ್ಧ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಇದೇ ಆ.24ರಂದು ಬೆಳಿಗ್ಗೆ 9.30ಕ್ಕೆ ಪಡುಬಿದ್ರೆ ಸಮೀಪದ ಕಂಚಿನಡ್ಕದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟ ಸಮಿತಿಯ ಅಧ್ಯಕ್ಷ ಸುಹಾಸ್ ಹೆಗ್ಡೆ ನಂದಳಿಕೆ ತಿಳಿಸಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹೆದ್ದಾರಿಯಲ್ಲಿ ಕಳೆದ 11 ವರ್ಷದ ಹಿಂದೆ ರಾಜ್ಯ ಸರಕಾರದ ನಿಧಿಯಿಂದ 61 ಕೋಟಿ ರೂ ವೆಚ್ಚದಲ್ಲಿ 28 ಕಿ.ಮಿ. ಉದ್ದದ ರಸ್ತೆಯನ್ನು ಅಭಿವೃದ್ಧಿ ಮಾಡಲಾಗಿತ್ತು. ಕಾಮಗಾರಿಪೂರ್ಣಗೊಳಿಸಿ 11 ವರ್ಷದ ಬಳಿಕ ಇದೀಗ ಏಕಾಏಕಿ ಹಾಸನದ ಭಾರತೀ ಕನ್ಸ್ಟ್ರಕ್ಷನ್ ಎಂಬ ಖಾಸಗಿ ಸಂಸ್ಥೆಯೂ ಪಡುಬಿದ್ರೆ ಪರಿಸರದ ಕಂಚಿನಡ್ಕದಲ್ಲಿ ಟೋಲ್ ಗೇಟ್ ನಿರ್ಮಿಸಲು ಗುದ್ದಲಿ ಪೂಜೆ ನಡೆಸಿದೆ. 2018 ರಲ್ಲಿ ಬೆಳ್ಮಣ್ ಪರಿಸರದಲ್ಲಿ ಟೋಲ್ ಗೇಟ್ ನಿರ್ಮಾಣದ ಪ್ರಸ್ತಾವಣೆ ಬಂದಾಗ, ಬೃಹತ್ ಜನಾಂದೋಲನವನ್ನು ನಡೆಸಿ ಯೋಜನೆಯನ್ನು ರದ್ದುಗೊಳಿಸಲಾಗಿತ್ತು. ಇದೀಗ ಮತ್ತೇ ಟೋಲ್ ಗೇಟ್ ಸದ್ದು ಮಾಡುತ್ತಿದೆ. ಇದರ ವಿರುದ್ದ ಪಕ್ಷತೀತಾವಾಗಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಪ್ರತಿಭಟನಾ ಸಭೆಯಲ್ಲಿ ಎಲ್ಲಾ ರಾಜಕೀಯ ಪಕ್ಷದ ಮುಖಂಡರು, ಧಾರ್ಮಿಕ ಮುಖಂಡರು, ಜಾತಿ ಸಂಘಟನೆಗಳು, ಸಾಮಾಜಿಕ ಸಂಘಟನೆಗಳು, ಸಮಾಜ ಸೇವಾ ಸಂಸ್ಥೆಗಳು, ಉದ್ಯಮಿಗಳು, ವರ್ತಕರು, ಬಸ್, ರಿಕ್ಷಾ, ಟ್ಯಾಕ್ಸಿ ಚಾಲಕ – ಮಾಲಕರು, ಕೃಷಿಕರು ಸೇರಿದಂತೆ ಎಲ್ಲಾ ವರ್ಗದ ಹತ್ತು ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ಲಕ್ಷ್ಮಣ್.ಎಲ್.ಶೆಟ್ಟಿ, ಪ್ರಮುಖರಾದ ಶಶಿಧರ್, ದಿನೇಶ್ ಕೋಟ್ಯಾನ್, ಜಯ.ಎಸ್.ಶೆಟ್ಟಿ, ಸರ್ವಜ್ಞ ತಂತ್ರಿ ಉಪಸ್ಥಿತರಿದ್ದರು.