ಜ್ಞಾನಸುಧಾ ಸಂಸ್ಥಾಪಕ ದಿ.ಗೋಪ ಶೆಟ್ಟಿಯವರ 103ನೇ ಜನ್ಮ ದಿನಾಚರಣೆ- 23.70 ಲಕ್ಷ ರೂ. ನೆರವು
ಕಾರ್ಕಳ : ವ್ಯಕ್ತಿಯ ಅಂತಃಕರಣ ಮಿಡಿಯುವ, ಮಾನವೀಯತೆ ಬೆಳೆಸುವ ಶಿಕ್ಷಣ ಲಭಿಸಿದರೆ ಸಾರ್ಥಕ, ಇಂದು ಅನಕ್ಷರಸ್ಥರಲ್ಲಿರುವ ಮಾನವೀಯತೆಯ ಗುಣ ವಿದ್ಯಾವಂತರೆನ್ನಿಸಿಕೊಂಡವರಲ್ಲಿ ಇರದಿರುವುದು ದುಃಖಕರ ಎಂದು ಮಂಗಳೂರಿನ ಶಾರದಾ ವಿದ್ಯಾಲಯಗಳ ಅಧ್ಯಕ್ಷರಾದ ಪ್ರೊ.ಎಂ.ಬಿ. ಪುರಾಣಿಕ್‌ರವರು ಹೇಳಿದರು.
ಅವರು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ವತಿಯಿಂದ ಗಣಿತನಗರದ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆದ ಸಂಸ್ಥಾಪಕ ದಿ.ಗೋಪ ಶೆಟ್ಟಿಯವರ 103ನೇ ಜನ್ಮದಿನಾಚರಣೆ ಹಾಗೂ ಸಾಮಾಜಿಕ ನೆರವಿನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಸುಯೋಗ್ಯವಾದ ಜ್ಞಾನವನ್ನು ನೀಡುತ್ತಿರುವ ಜ್ಞಾನಸುಧಾವು, ಡಾ.ಸುಧಾಕರ್ ಶೆಟ್ಟಿಯವರ ಆದರ್ಶ ಕಾರ್ಯಗಳಿಂದ ಜನಮನ್ನಣೆಗೆ ಪಾತ್ರವಾಗಿದೆ. ಸಮಾಜದಿಂದ ಬಂದುದನ್ನು ಸಮಾಜಕ್ಕೆ ನೀಡುತ್ತಿರುವ ಟ್ರಸ್ಟ್ನ ಕಾರ್ಯವು ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಶಕ್ತಿ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ. ಕೆ.ಸಿ.ನಾಯ್ಕ್ ಮಾತನಾಡಿ, ಇಂತಹ ಆದರ್ಶ ಕಾರ್ಯಕ್ರಮದ ರೂವಾರಿ ಡಾ. ಸುಧಾಕರ್ ಶೆಟ್ಟಿ ಅಭಿನಂದನೆಗೆ ಅರ್ಹರು. ವಿದ್ಯಾರ್ಥಿಗಳು, ದೇಶಕ್ಕೆ ಗೌರವ ತಂದುಕೊಡುವ ಮಕ್ಕಳಾಗಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಕಾರ್ಕಳ ರೋಟರಿ ಆಸ್ಪತ್ರೆಯ ಮುಖ್ಯಾ ವೈದ್ಯಾಧಿಕಾರಿ ಡಾ.ಕೀರ್ತಿನಾಥ್ ಬಲ್ಲಾಳ್ ಮಾತನಾಡಿ, ಇಂದು ಸಾಮಾಜಿಕ ಜಾಲತಾಣದ ಪ್ರಜ್ಞೆ ಜಾಸ್ತಿಯಾಗಿ, ಸಾಮಾಜಿಕ ಕಳಕಳಿಯ ಕುಂಠಿತವಾಗುತ್ತಿರುವುದು ದುಃಖಕರ. ವಿದ್ಯಾರ್ಥಿಗಳು ಸಮಾಜಮುಖಿಯಾಗಿ ಬೆಳೆದು ಮಾದರಿಯಾಗಿ ಹೊರಹೊಮ್ಮಬೇಕು. ವೃತ್ತಿ ಯಾವುದು ಮುಖ್ಯವಲ್ಲ. ಆ ವೃತ್ತಿಗೆ ಎಷ್ಟು ಗೌರವ ತಂದುಕೊಡಬಲ್ಲೆವು ಎನ್ನುವುದು ಮುಖ್ಯವೆಂದು ಎಂದರು. ಟ್ರಸ್ಟಿನಿಂದ ರೋಟರಿ ಆಸ್ಪತ್ರೆಯ ಕಣ್ಣಿನ ವಿಭಾಗಕ್ಕೆ ನೀಡಿದ ರೂ.20ಲಕ್ಷ ದೇಣಿಗೆಗೆ ನಮ್ಮ ಆಡಳಿತ ಮಂಡಳಿಯು ಸದಾ ಅಭಾರಿಯಾಗಿರುತ್ತದೆ ಎಂದರು. ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲೂ ಸಂದೇಶವಿರುತ್ತದೆ. ಮಕ್ಕಳು ಮುಂದಿನ ಜೀವನದಲ್ಲಿ ಇಂತಹ ಕಾರ್ಯಕ್ರಮಗಳಿಂದ ಪ್ರೇರಿತರಾದಾಗ ನಮ್ಮ ಸಮಾಜಮುಖಿ ಕಾರ್ಯ ಸಾರ್ಥಕ ಎಂದರು. ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸಂಗೀತಾ ಕುಲಾಲ್ ನಿರೂಪಿಸಿ ವಂದಿಸಿದರು.
ಟ್ರಸ್ಟ್ನ ವತಿಯಿಂದ ರೂ.23.70 ಲಕ್ಷ ರೂ. ನೆರವು :
ಇದೇ ಸಂದರ್ಭ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ವತಿಯಿಂದ ಗಣಿತನಗರದ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆದ ಸಂಸ್ಥಾಪಕ ದಿ.ಗೋಪ ಶೆಟ್ಟಿಯವರ 103ನೇ ಜನ್ಮದಿನಾಚರಣೆಯ ಸಂದರ್ಭ ವಿವಿಧ ಸಾಮಾಜಿಕ ನೆರವಿನ ಕಾರ್ಯಕ್ರಮದಲ್ಲಿ ಒಟ್ಟಾರೆ ಟ್ರಸ್ಟ್ ರೂ. 23.70 ಲಕ್ಷ ರೂ. ನೆರವು ನೀಡಲಾಯಿತು.
ಸಾಮಾಜಿಕ ನೆರವು :ಟ್ರಸ್ಟಿನ ವತಿಯಿಂದ ಸ್ಥಳೀಯ ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಯ ಕಣ್ಣಿನ ವಿಭಾಗಕ್ಕೆ ರೂ. 20ಲಕ್ಷಗಳ ಸಹಾಯಧನವನ್ನು ಕಣ್ಣಿನ ವಿಭಾಗದ ಮುಖ್ಯಸ್ಥ ಡಾ.ಚಿದಾನಂದ ಕುಲಕರ್ಣಿಯವ ರಿಗೆ ಹಸ್ತಂತರಿಸಲಾಯಿತು. ಮಂಗಳೂರಿನ ಶಕ್ತಿ ಎಜ್ಯುಕೇಶನ್ ಟ್ರಸ್ಟ್ಗೆ 1 ಲಕ್ಷ ರೂ.ಗಳ ವಿದ್ಯಾರ್ಥಿ ವೇತನವನ್ನು ಆಡಳಿತಾಧಿಕಾರಿ ರಮೇಶ್ ಹಾಗೂ ಪ್ರಾಂಶುಪಾಲ ವೆಂಕಟೇಶ್‌ರವರಿಗೆ ಕೊಡಲಾಯಿತು. ಬೆಂಗಳೂರಿನ ಪರಿವರ್ತನ್ ಟ್ರಸ್ಟ್ಗೆ ರೂ. 1 ಲಕ್ಷವನ್ನು ಟ್ರಸ್ಟಿನ ರವಿರಾಜ್‌ರವರಿಗೆ ಕೊಡಲಾಯಿತು. ಮಣಿಪಾಲದ ಮೇಘ ಇವರಿಗೆ ಮನೆನಿರ್ಮಾಣದ ಪ್ರಯುಕ್ತ ರೂ. 10ಸಾವಿರ., ಸ್ವಚ್ಛಪಾಲಕ ದಿವ್ಯಚೇತನ ನೀಲಾಧರ್ ಶೆಟ್ಟಿಗಾರ್ ರೂ. 10ಸಾವಿರ, ಸ.ಪ್ರೌ.ಶಾಲೆ ತೊರೆಹಡ್ಲುವಿಗೆ ರೂ. 10ಸಾವಿರ ಆರ್ಥಿಕ ನೆರವು ಹಸ್ತಂತರಿಸಲಾಯಿತು.
ಸನ್ಮಾನ ಕಾರ್ಯಕ್ರಮ : ಇದೇ ಸಂದರ್ಭ ಖ್ಯಾತ ಮುಳುಗು ತಜ್ಞ ಈಶ್ವರ ಮಲ್ಪೆ ಇವರಿಗೆ ರೂ. 10 ಸಾವಿರ ನೀಡಿ ಗೌರವಿಸಲಾಯಿತು. ಹಾಗೂ ಕಾರ್ಕಳ ಮೆಸ್ಕಾಂನ ಎ ಮತ್ತು ಬಿ ವಿಭಾಗದ 26 ಪವರ್ ಮೆನ್‌ಗಳಿಗೆ ತಲಾ 5 ಸಾವಿರದಂತೆ ರೂ.1 ಲಕ್ಷದ 30 ಸಾವಿರ ರೂ. ನೀಡಿ ಗೌರವಿಸಲಾಯಿತು.
ರಕ್ತದಾನ ಶಿಬಿರ : ಸಂಸ್ಥಾಪಕರ ದಿನಾಚರಣೆಯ ಪ್ರಯುಕ್ತ ಕೆ.ಎಂ.ಸಿ. ಬ್ಲಡ್ ಸೆಂಟರ್ ಹಾಗೂ ಜ್ಞಾನಸುಧಾ ಹಳೆ ವಿದ್ಯಾರ್ಥಿ ಸಂಘ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕ ನೆರವಿನೊಂದಿಗೆ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಬ್ಲಡ್ ಸೆಂಟರ್ – ಕೆ.ಎಂ.ಸಿ.ಯ ನಿರ್ದೇಶಕರಾದ ಡಾ. ಶಮೀ ಶಾಸ್ತ್ರಿ ಉದ್ಘಾಟಿಸಿದರು. ಶಿಬಿರದಿಂದ 103 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ವಿದ್ಯಾವತಿ ಎಸ್ ಶೆಟ್ಟಿ, ಅನಿಲ್ ಕುಮಾರ್ ಜೈನ್, ಸಿ.ಎ. ನಿತ್ಯಾನಂದ ಪ್ರಭು, ಆಡಳಿತ ಮಂಡಳಿ ಸದಸ್ಯರಾದ ಶಾಂತಿರಾಜ್ ಹೆಗ್ಡೆ, ಕಾರ್ಕಳ ಜ್ಞಾನಸುಧಾ ಕ್ಯಾಂಪಸ್‌ನ ಸಿ.ಇ.ಒ ಹಾಗೂ ಪ್ರಾಂಶುಪಾಲ ದಿನೇಶ್ ಎಂ ಕೊಡವೂರ್, ಪಿ.ಆರ್.ಒ. ಶ್ರೀಮತಿ ಜ್ಯೋತಿ ಪದ್ಮನಾಭ ಭಂಡಿ, ಕಾರ್ಕಳ ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗಳಾದ ಶಿಲ್ಪಾ ಹಾಗೂ ರೂಪಕಲಾ ಕಾಮತ್ ಮತ್ತು ಜ್ಞಾನಸುಧಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನ್ಯಾಯವಾದಿ ಭವಿಷ್ ಸಹಿತ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.