ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮನೆಗೆ ಕಲ್ಲೆಸತ
ಮಂಗಳೂರು: ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮನೆಗೆ ದುಷ್ಕರ್ಮಿಗಳು ಕಲ್ಲೆಸದ ಘಟನೆ ಕಳೆದರಾತ್ರಿ ನಡೆದಿದೆ.
ಬುಧವಾರ ರಾತ್ರಿ 11.30ರ ಸುಮಾರಿಗೆ ಮನೆಯ ಮುಂಭಾಗಕ್ಕೆ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಮನೆಯಲ್ಲಿ ಐವನ್ ಡಿಸೋಜಾ ಹೊರತುಪಡಿಸಿ ಕುಟುಂಬಸ್ಥರು ಇದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದ.ಕ.ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ: ವಿಧಾನ ಪರಿಷತ್ ಶಾಸಕ ಐವನ್ ಡಿಸೋಜರ ವಿರುದ್ಧ ಎಫ್‌ಐಆರ್ ದಾಖಲಿಸದ ಮತ್ತು ಅವರನ್ನು ಬಂಧಿಸದ ಪೊಲೀಸರ ಕ್ರಮ ಖಂಡಿಸಿ ದ.ಕ.ಜಿಲ್ಲಾ ಬಿಜೆಪಿ ಯುವ ಮೋರ್ಚಾವು ಬುಧವಾರ ಬರ್ಕೆ ಠಾಣೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರೂ ಕೊನೆಯ ಕ್ಷಣದಲ್ಲಿ ಮುತ್ತಿಗೆ ಕೈ ಬಿಟ್ಟು ಗಡುವು ವಿಧಿಸಿದೆ.
ನಗರದಲ್ಲಿ ಮೊನ್ನೆ ಕಾಂಗ್ರೆಸ್ ಪ್ರತಿಭಟನೆ ನಡೆಸಿದ ವೇಳೆ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಮತ್ತು ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸಬೇಕು ಎಂದು ಬಿಜೆಪಿ ಯುವ ಮೋರ್ಚಾ ಒತ್ತಾಯಿಸಿತ್ತು. ಆದರೆ ಪೊಲೀಸರಿಂದ ಯಾವ ಕ್ರಮವೂ ಆಗದ ಕಾರಣ ಬಿಜೆಪಿಗರು ಬುಧವಾರ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದರು. ಬುಧವಾರ ಬಿಜೆಪಿಯ ಕೆಲವು ಮುಖಂಡರು ಠಾಣೆಗೆ ಭೇಟಿ ನೀಡಿ ಎಸಿಪಿ ಪ್ರತಾಪ್ ಸಿಂಗ್ ಥೋರಟ್ ಜೊತೆ ಮಾತನಾಡಿ ಮುಂದಿನ 24 ಗಂಟೆಯೊಳಗೆ ಎಫ್‌ಐಆರ್ ದಾಖಲಿಸದಿದ್ದರೆ ಜಿಲ್ಲಾದ್ಯಂತ ಹೋರಾಟ ಮಾಡುವುದಾಗಿ ತಿಳಿಸಿ ಮರಳಿದೆ.
ಜಿಲ್ಲಾ ವಕ್ತಾರ ಅರುಣ್ ಶೇಟ್, ಯುವ ಮೋರ್ಚಾ ಮುಖಂಡರಾದ ನಿಶಾಂತ್ ಪೂಜಾರಿ, ಸಾಕ್ಷಾತ್ ಶೆಟ್ಟಿ, ರಕ್ಷಿತ್ ಕೊಟ್ಟಾರಿ, ಅವಿನಾಶ್ ಸುವರ್ಣ, ಜೋಯಲ್ ಮೆಂಡೋನ್ಸಾ ಮತ್ತಿತರರಿದ್ದರು.
ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಮಾತನಾಡಿ ಐವನ್ ಡಿಸೋಜ ವಿರುದ್ಧ ಬರ್ಕೆ ಠಾಣೆಯಲ್ಲಿ ನಾನಲ್ಲದೆ ಶಹನವಾಝ್, ಅಖಿಲೇಶ್ ಶೆಟ್ಟಿ, ಅಕ್ಷಿತ್ ಶೆಟ್ಟಿ ಸಹಿತ ನಾಲ್ಕು ಮಂದಿ, ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಠಾಣೆ ಸೇರಿದಂತೆ 34 ಕ್ಕೂ ಅಧಿಕ ದೂರುಗಳನ್ನು ನೀಡಿದ್ದೇವೆ. ಆದರೆ ಪೊಲೀಸರು ಕ್ರಮ ಜರುಗಿಸಿಲ್ಲ ಎಂದು ಆಪಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸಿಪಿ ಪ್ರತಾಪ್‌ಸಿಂಗ್ ಥೋರಟ್, ಕೇಸು ದಾಖಲಿಸಲು ಕಾನೂನು ತಜ್ಞರ ಸಲಹೆ ಪಡೆಯಲಾಗುವುದು ಎಂದರು.