ಉಡುಪಿ: ಏಕಬಳಕೆ ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಷೇಧ

ಉಡುಪಿ, ಆ.21: ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಹಾಗೂ ಬಳಕೆಯನ್ನು ನಿರ್ಬಂಧಿಸಿರುವ ಕುರಿತು ರಾಜ್ಯಪತ್ರ ಅಧಿಸೂಚನೆಯಲ್ಲಿ ಪ್ಲಾಸ್ಟಿಕ್ ಕೈಚೀಲ, ಪ್ಲಾಸ್ಟಿಕ್ ಭಿತ್ತಿಪತ್ರ ತೋರಣ, ಪ್ಲಾಸ್ಟಿಕ್ ಫ್ಲೆಕ್ಸ್, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಚಮಚ, ಪ್ಲಾಸ್ಟಿಕ್ ಕ್ಲಿನ್ ಫಿಲ್ಮ್, ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್, ಥರ್ಮೋಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋಬಿಡ್ಸ್ ನಿಂದ ತಯಾರಾದ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಸರಬರಾಜು, ಸಂಗ್ರಹಣೆ, ಸಾಗಣಿಕೆ, ಮಾರಾಟ ಮತ್ತು ವಿತರಣೆ ಮಾಡುವುದನ್ನು ರಾಜ್ಯಾದ್ಯಾಂತ ನಿಷೇಧಿಸಿ ಅಧಿಸೂಚನೆ ಹೊರಡಿಸಲಾಗಿರುತ್ತದೆ.

ಕೇಂದ್ರ ಸರ್ಕಾರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯ, ನವದೆಹಲಿ ಇವರು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮ, 2016ರ ತಿದ್ದುಪಡಿ, 2021ರನ್ವಯ ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಸರಬರಾಜು, ಸಂಗ್ರಹಣೆ, ಸಾಗಾಣಿಕೆ, ಮಾರಾಟ ಮತ್ತು ವಿತರಣೆಯನ್ನು ನಿರ್ಬಂಧಿಸಿ ಈಗಾಗಲೇ ಅಧಿಸೂಚನೆಯನ್ನು ಜಾರಿಗೊಳಿಸಲಾಗಿರುತ್ತದೆ.

ರಾಜ್ಯ ಸರ್ಕಾರದ ಸುತ್ತೋಲೆಯಲ್ಲಿಯೂ ಏಕ ಬಳಕೆ ಪ್ಲಾಸ್ಟಿಕ್‌ಗಳಾದ ಇಯರ್ ಬಡ್‌ಗಳು, ಬಲೂನ್‌ಗಳು, ಪ್ಲಾಸ್ಟಿಕ್ ಧ್ವಜಗಳು, ಕ್ಯಾಂಡಿ ಸ್ಟಿಕ್‌ಗಳು, ಐಸ್ ಕ್ರೀಮ್ ಸ್ಟಿಕ್‌ಗಳು, ಪಾಲಿಸ್ಟೈರೀನ್ [ಥರ್ಮೋಕೋಲ್] ಅಲಂಕಾರಕ್ಕಾಗಿ; ಪ್ಲೇಟ್‌ಗಳು, ಕಪ್‌ಗಳು, ಗ್ಲಾಸ್‌ಗಳು, ಕಟ್ಲರಿಗಳಾದ ಫೋರ್ಕ್ಗಳು, ಚಮಚಗಳು, ಚಾಕುಗಳು, ಟ್ರೇಗಳು, ಸ್ವೀಟ್ ಬಾಕ್ಸ್ಗಳ ಸುತ್ತ ಸುತ್ತುವ ಅಥವಾ ಪ್ಯಾಕಿಂಗ್ ಫಿಲ್ಮ್ಗಳು, ಆಮಂತ್ರಣ ಕಾರ್ಡ್ಗಳು ಮತ್ತು ಸಿಗರೇಟ್ ಪ್ಯಾಕೆಟ್‌ಗಳು, 100 ಮೈಕ್ರಾನ್‌ಗಿಂತ ಕಡಿಮೆ ಪ್ಲಾಸ್ಟಿಕ್ ಅಥವಾ ಪಿವಿಸಿ ಬ್ಯಾನರ್‌ಗಳು, ಸ್ಟಿರರ್‌ಗಳ ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ಸಹ ನಿಷೇಧಿಸಲಾಗಿರುತ್ತದೆ. ಏಕ ಬಳಕೆ ಪ್ಲಾಸ್ಟಿಕ್ ತಯಾರಿಕೆ, ಮಾರಾಟ, ಬಳಕೆ ನಿಷೇಧಿತವಾಗಿದ್ದರೂ ಸಹ ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಮತ್ತು ಬಳಕೆ ಕಂಡುಬರುತ್ತಿದ್ದು, ಜಿಲ್ಲೆಯಾದ್ಯಂತ ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸುತ್ತಿರುವ, ಉತ್ಪಾದಿಸುತ್ತಿರುವ ಹಾಗೂ ಮಾರಾಟ ಮಾಡುತ್ತಿರುವವರ ಮಳಿಗೆ, ಕಾರ್ಖಾನೆಗಳು ಇವುಗಳ ಮೇಲೆ ಅನಿರೀಕ್ಷಿತ ದಾಳಿಗಳನ್ನು ನಡೆಸಿ ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಕಂಡುಬಂದಲ್ಲಿ ಜಪ್ತಿ ಮಾಡಿ ಸದರಿಯವರ ವಿರುದ್ಧ ದಂಡ ಹಾಗೂ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಈಗಾಗಲೇ ಕಾರ್ಯಪಡೆ ತಂಡವನ್ನು ರಚಿಸಿದ್ದು, ಕಾರ್ಯಾಚರಣೆ ಸಂದರ್ಭದಲ್ಲಿ ಏಕಬಳಕೆ ವಸ್ತುಗಳ ಉತ್ಪಾದನೆ, ಮಾರಾಟ, ಸಂಗ್ರಹ ಕಂಡು ಬಂದಲ್ಲಿ, ಯಾವುದೇ ಅವಕಾಶವನ್ನು ನೀಡದೆ ಕಾನೂನಿನ ರೀತಿಯಲ್ಲಿ ದಂಡ ವಿಧಿಸುವುದರೊಂದಿಗೆ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಲಾಗುವುದು. ಆದ್ದರಿಂದ ಸಾರ್ವಜನಿಕರು ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳ ಬಳಕೆಯ ಬದಲಾಗಿ, ಪರ್ಯಾಯ ವಸ್ತುಗಳನ್ನು ಉಪಯೋಗಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!