ಉಡುಪಿಯಲ್ಲಿ ಕೋವಿಡ್ ಲಸಿಕೆ ಸಂಗ್ರಹಕ್ಕೆ ಸಿದ್ಧಗೊಂಡಿದೆ ಕೊಠಡಿ

ಉಡುಪಿ: ಇಡೀ ವಿಶ್ವವನ್ನೇ ಭೀಕರವಾಗಿ ಕಾಡುತ್ತಿರುವ, ಇದುವರೆಗೆ ಕೋಟ್ಯಾಂತರ ಮಂದಿಯನ್ನು ಆವರಿಸಿ, ಲಕ್ಷಾಂತರ ಮಂದಿಯನ್ನು ಬಲಿ ಪಡೆದಿರುವ, ಕೋವಿಡ್-19 ಮಹಾಮಾರಿಗೆ ಕಡಿವಾಣ ಹಾಕಲು ಕೊರೊನಾ ಆರಂಭವಾದ ಕಾಲದಿಂದಲೂ, ವಿಶ್ವದ ಅನೇಕ ದೇಶಗಳಲ್ಲಿ ಲಸಿಕೆ ಪ್ರಯೋಗಗಳು ನಡೆಯುತ್ತಲೇ ಇವೆ. ವಿಶ್ವ ಆರೋಗ್ಯ ಸಂಸ್ಥೆ ಸಹ ಕೊರೋನಾ ಲಸಿಕೆ ಪ್ರಯೋಗದಲ್ಲಿ ತನ್ನನ್ನು ತಾನು ತೊಡಗಿಸಿ ಕೊಂಡಿದೆ. ಪ್ರಸ್ತುತ ಲಸಿಕೆಯ ಅಂತಿಮ ಸಿದ್ದತೆಯಲ್ಲಿದ್ದು, ಶೀಘ್ರದಲ್ಲಿ ವಿಶ್ವದಾದ್ಯಂತ ಆರಂಭಿಕ ಲಸಿಕೆ ನೀಡುವ ಕಾರ್ಯಕ್ರಮ ಆರಂಭಗೊಳ್ಳಲಿದೆ.

ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಸಂಗ್ರಹ ಮಾಡಲು ಅಗತ್ಯವಿರುವ ಲಸಿಕಾ ಕೊಠಡಿ (ವಾಕ್ ಇನ್ ಕೂಲರ್)ಯನ್ನು ಸಂಪೂರ್ಣ ಸಿದ್ಧಗೊಳಿಸಲಾಗಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಸಿದ್ಧಗೊಂಡಿರುವ ಈ ಲಸಿಕಾ ಸಂಗ್ರಹ ಕೊಠಡಿ (ವಾಕ್ ಇನ್ ಕೂಲರ್) ಯಲ್ಲಿ ಸುಮಾರು 2.28 ಕೋಟಿ ಡೋಸ್ ಲಸಿಕೆಯನ್ನು ಸಂಗ್ರಹಿಸಿಡುವ ಸಾಮರ್ಥ್ಯವಿದ್ದು, ಸಂಪೂರ್ಣ ಹವಾನಿಯಂತ್ರಣ ವ್ಯವಸ್ಥೆ ಹೊಂದಿದೆ. ವಿಶ್ವದಾದ್ಯಂತ 248 ಕ್ಕೂ ಅಧಿಕ ಲಸಿಕೆ ತಯಾರಿಕಾ ಕಂಪೆನಿಗಳು ಕೋವಿಡ್ ಲಸಿಕೆ ಕಂಡು ಹಿಡಿಯುವ ಪ್ರಯತ್ನ ಮಾಡುತ್ತಿದ್ದು, ಅದರಲ್ಲಿ 197 ಲಸಿಕೆಗಳು ಪ್ರೀ ಕ್ಲಿನಿಕಲ್, 23 ಲಸಿಕೆಗಳು ಪೇಸ್ 1, 166 ಲಸಿಕೆಗಳು ಫೇಸ್ 1/2, 2 ಲಸಿಕೆಗಳು ಫೇಸ್ 2, 10 ಲಸಿಕೆಗಳು ಫೇಸ್ 3 ರಲ್ಲಿ ಪರೀಕ್ಷೆಗೆ ಒಳಪಟ್ಟಿದ್ದು, ಇದುವರೆಗೆ ಯಾವುದೇ ಲಸಿಕೆಗಳಿಗೆ ಅನುಮತಿ ದೊರೆತಿಲ್ಲ. ಶೀಘ್ರದಲ್ಲಿ ಅನುಮತಿ ದೊರೆಯುವ ನಿರೀಕ್ಷೆಯಿದೆ.

ಕೇಂದ್ರ ಸರ್ಕಾರದ ನಿರ್ದೇಶನದಂತೆ, ಲಸಿಕೆಯನ್ನು ಪ್ರಾಥಮಿಕ ಹಂತದಲ್ಲಿ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿಗಳಿಗೆ ನೀಡಬೇಕಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿ ಕೆಪಿಎಂಇ ಕಾಯ್ದೆಯಡಿ ನೊಂದಣಿಯಾಗಿ ವೈದ್ಯಕೀಯ ಸೇವೆ ಒದಗಿಸುತ್ತಿರುವ 982 ಖಾಸಗಿ
ಸಂಸ್ಥೆಗಳು ಹಾಗೂ 92 ಸರಕಾರಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ, ವೈದ್ಯರು, ಶುಶ್ರೂಶಕರು, ಲ್ಯಾಬ್ ಟೆಕ್ನೀಷಿಯನ್‌ಗಳು, ಸಹಾಯಕ ಸಿಬ್ಬಂದಿ ಸೇರಿದಂತೆ ಪ್ರತಿಯೊಬ್ಬರ ಡೇಟಾಬೇಸ್‌ನ್ನು ಶೀಘ್ರದಲ್ಲಿ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಈಗಾಗಲೇ ಸೂಚನೆ ನೀಡಿದ್ದಾರೆ.

ಕೋವಿಡ್ ಲಸಿಕೆ ತಯಾರಿಕಾ ಘಟಕದಿಂದ ಆರಂಭಗೊ0ಡು, ಸಂಚಾರ ವ್ಯವಸ್ಥೆ, ಲಸಿಕಾ ಸಂಗ್ರಹ ಕೊಠಡಿಯಲ್ಲಿ ಶೇಖರಣೆ ಮತ್ತು ಲಸಿಕೆ ವಿತರಣಾ ಸ್ಥಳಕ್ಕೆ ತಲುಪುವವರೆಗೆ ಲಸಿಕೆಗೆ ಅಗತ್ಯವಿರುವ 2 ರಿಂದ 8 ಡಿಗ್ರಿ ವರೆಗಿನ ತಾಪಮಾನ ಕಾಪಾಡುವ ಅಗತ್ಯವಿದ್ದು, ಯಾವುದೇ ಸಂದರ್ಭದಲ್ಲಿ ಲಸಿಕೆಯ ತಾಪಮಾನ ವ್ಯತ್ಯಯವಾಗದಂತೆ ನಿಗಾ ವಹಿಸಲು
ಜಿಲ್ಲೆಯಲ್ಲಿ ಈಗಾಗಲೇ ಒಟ್ಟು 77 ಕೋಲ್ಡ್ ಚೈನ್ ಸಿಸ್ಟಂ ಸ್ಥಳಗಳನ್ನು ಗುರುತಿಸಿದ್ದು, ಈ ಎಲ್ಲಾ ಸ್ಥಳಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಲಸಿಕೆ ಸಾಗಾಟಕ್ಕೆ 1324 ವಾಹನಗಳು, 9370 ಐಸ್ ಪ್ಯಾಕ್‌ಗಳ ವ್ಯವಸ್ಥೆ ಮಾಡಲಾಗಿದ್ದು. ಲಸಿಕೆ ನೀಡಲು ನುರಿತ ಸಿಬ್ಬಂದಿಯನ್ನೂ ಸಹ ಗುರುತಿಸಲಾಗಿದೆ ಎನ್ನುತ್ತಾರೆ ಡಿ.ಹೆಚ್.ಓ. ಡಾ. ಸುಧೀರ್ ಚಂದ್ರ ಸೂಡಾ.

Leave a Reply

Your email address will not be published. Required fields are marked *

error: Content is protected !!