ಆ.21-27 ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ: ಸಿದ್ದರಾಮಯ್ಯ ಬೆನ್ನಿಗೆ ನಿಂತ ಅಹಿಂದ

ಬೆಂಗಳೂರು: ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಬೆಂಬಲಿಗರು ಸರಣಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರ ನಿರ್ಧಾರವು ಕಾಂಗ್ರೆಸ್ ಪಕ್ಷ ಮತ್ತು ಬೆಂಬಲಿಗರಲ್ಲಿ ವ್ಯಾಪಕ ಅಸಮಾಧಾನ ವನ್ನು ಹುಟ್ಟುಹಾಕಿದೆ. ವಿಶೇಷವಾಗಿ ಸಿದ್ದರಾಮಯ್ಯ ಅವರಿಗೆ ನಿಕಟವಾಗಿರುವ ಅಹಿಂದ ಸಮುದಾಯಗಳ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿರುವ ಅಹಿಂದ ಸಮುದಾಯ ಗಳ ಮುಖಂಡರು, ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಒಕ್ಕೂಟವು ಆ. 21 ಮತ್ತು 27 ರಂದು ಬೃಹತ್ ಪ್ರತಿಭಟನೆಗಳ ನ್ನು ಘೋಷಿಸಿದೆ.

ಮೊದಲ ದಿನ, ವಿವಿಧ ಹಿಂದುಳಿದ ಸಮುದಾಯಗಳು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪಂಜಿನ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ಈ ಪ್ರತಿಭಟನೆಯಲ್ಲಿ ಸುಮಾರು 2,000 ಜನರು ಭಾಗವಹಿಸುವ ನಿರೀಕ್ಷೆಯಿದೆ. ಆಗಸ್ಟ್ 27ರ ಪ್ರತಿಭಟನೆಯಲ್ಲಿ ಮಾವಳ್ಳಿ ಶಂಕರ್, ಅನಂತ್ ನಾಯಕ್, ಯೆನ್ನಗೆರೆ ವೆಂಕಟರಾಮಯ್ಯ ಮತ್ತು ಕೆಎಂ ರಾಮಚಂದ್ರಪ್ಪ ಸೇರಿದಂತೆ ಹಿಂದುಳಿದ ಸಮುದಾಯಗಳ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ ಮಾತನಾಡಿ, ಸ್ವಚ್ಛ ದಾಖಲೆ ಕಾಯ್ದುಕೊಂಡ ಮುಖ್ಯಮಂತ್ರಿ ಗಳ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಏಕಾಏಕಿ ಆಧಾರ ರಹಿತ ಆರೋಪ ಮಾಡುತ್ತಿವೆ. ಈ ಆರೋಪಗಳನ್ನು ಸಾಬೀತುಪಡಿಸಲು ಅವರ ಬಳಿ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಇದು ಸಿದ್ದರಾಮಯ್ಯ ಅವರ ಪ್ರತಿಷ್ಠೆ ಹಾಳುಮಾಡಲು ಮತ್ತು ಅವರ ರಾಜಕೀಯ ಜೀವನವನ್ನು ಅಂತ್ಯಗೊಳಿಸಲು ನಡೆಸಿದ ಪಿತೂರಿಯಾಗಿದೆ ಎಂದು ಹೇಳಿದರು.

ಇದೇ ವೇಳೆ ರಾಜ್ಯಪಾಲರನ್ನು ಟೀಕಿಸಿದ ಅವರು, ಅವರ ಈ ನಿರ್ಧಾರ ಪಕ್ಷಪಾತದಿಂದ ಕೂಡಿದೆ. ಅರಾಜಕೀಯವಾಗಿ ಮತ್ತು ತಟಸ್ಥವಾಗಿ ಉಳಿಯಬೇಕಾದ ರಾಜ್ಯಪಾಲರ ಕಚೇರಿಯನ್ನು ಈ ರೀತಿ ದುರುಪಯೋಗಪಡಿಸಿಕೊಳ್ಳುತ್ತಿರುವು ದು ನಮಗೆ ತೀವ್ರ ನೋವು ತಂದಿದೆ ಎಂದು ಹೇಳಿದ್ದಾರೆ,

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು ಮಾತನಾಡಿ, ಪರಿಸ್ಥಿತಿ ಅವಲೋಕಿಸಲಾಗುತ್ತಿದ್ದು, ನಂತರದ ದಿನಗಳಲ್ಲಿ ಮುಂದಿನ ಕ್ರಮದ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇಂತಹ ಪ್ರತಿಭಟನೆಗಳು ರಾಜ್ಯಕ್ಕೆ ಹೊಸದಲ್ಲ. 2011ರಲ್ಲಿ ಅಂದಿನ ರಾಜ್ಯಪಾಲ ಎಚ್‌ಆರ್‌ ಭಾರದ್ವಾಜ್‌ ಸಿಎಂ ಬಿಎಸ್‌ ಯಡಿಯೂರಪ್ಪ ಅವರ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಿದಾಗಲೂ ಬಿಜೆಪಿ ರಾಜ್ಯಾದ್ಯಂತ ಬಂದ್‌ ನಡೆಸಿ ರಾಜ್ಯಪಾಲರ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿತ್ತು.

Leave a Reply

Your email address will not be published. Required fields are marked *

error: Content is protected !!