ಶಬರಿಮಲೆ ಅಯ್ಯಪ್ಪ ಸ್ವಾಮಿ ವೃತದ ಆಚರಣೆ: ಗುರುಸ್ವಾಮಿಗಳಿಂದ ನಂಬಿಕೆಗೆ ಚ್ಯುತಿ

Oplus_131072

ಉಡುಪಿ: ಇತ್ತೀಚಿನ ದಿನಗಳಲ್ಲಿ ಕೆಲವು ಗುರುಸ್ವಾಮಿಗಳು ಶಬರಿಮಲೆ ಅಯ್ಯಪ್ಪಸ್ವಾಮಿ ವೃತದ ಆಚರಣೆಗಳನ್ನು ಗಾಳಿಗೆ ತೂರಿ ಹಿಂದೂ ಸಮಾಜದ ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ಉಂಟು ಮಾಡುತ್ತಿರುವುದು ವಿಷಾದನೀಯ ಎಂದು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಮೆಂಡನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶೇಷವಾಗಿ ಗುರುಸ್ವಾಮಿಗಳು ಆಚಾರವಿಚಾರಗಳಲ್ಲಿ ರಾಜಿ ಮಾಡಿಕೊಳ್ಳದೆ ಧರ್ಮ ರಕ್ಷಣಾ ಕೆಲಸದಲ್ಲಿ ತೊಡಗಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು. ಪ್ರಜ್ಞಾವಂತ ಸಮಾಜ ಇಂಥ ಗೊಂದಲ ಸೃಷ್ಟಿ ಮಾಡುವ ಗುರುಸ್ವಾಮಿಗಳನ್ನು ಪ್ರಶ್ನಿಸಬೇಕು ಆಗ ಮಾತ್ರ ಅಸಂಬದ್ಧ ಆಚರಣೆಗಳಿಗೆ ಕಡಿವಾಣ ಹಾಕಬಹುದು.

ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಒಂದು ರಾಷ್ಟ್ರೀಯ ಸಂಘಟನೆಯಾಗಿದ್ದು ” ಸರ್ವ್ ಅಯ್ಯಪ್ಪ, ಸೇವ್ ಶಬರಿಮಲ (Serve Ayyappa Save Sabarimala) ಎಂಬ ಮೂಲ ಮಂತ್ರದೊಂದಿಗೆ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಪರಂಪರೆ ಮತ್ತು ಆಚರಣೆಗಳನ್ನು ಉಳಿಸಿಕೊಳ್ಳುವುದ ರೊಂದಿಗೆ ಹಿಂದೂ ಧರ್ಮ ರಕ್ಷಣೆ ಮತ್ತು ಸೇವಾ ಉದ್ದೇಶದೊಂದಿಗೆ 2008 ನೇ ವರ್ಷದಿಂದ ಕೆಲಸ ಮಾಡುತ್ತಿದೆ.

ಈಗಾಗಲೇ ದೇಶದ ಉದ್ದಗಲಕ್ಕೂ ಆಸ್ಕ್ ಕೇಂದ್ರಗಳನ್ನು ತೆರೆಯುವ ಮೂಲಕ ಶಬರಿಮಲೆ ಯಾತ್ರೆ ಕೈಗೊಳ್ಳುವ ಮಾಲಾಧಾರಿಗಳಿಗೆ ಅನುಕೂಲ ಮಾಡಿ ಕೊಡುವ ನಿಟ್ಟಿನಲ್ಲಿ ಯಾತ್ರೆಯ ಸಂದರ್ಭದಲ್ಲಿ ಅನ್ನದಾನ, ವಿಶ್ರಾಂತಿ ಆರೋಗ್ಯದ ತೊಂದರೆ ಉಂಟಾದಲ್ಲಿ ವ್ಯೆದ್ಯಕೀಯ ವ್ಯವಸ್ಥೆ ಮಾಡುವುದರ ಜೊತೆಗೆ ಎಲ್ಲಾ ಅಯ್ಯಪ್ಪ ಭಕ್ತರನ್ನು ಒಗ್ಗೂಡಿಸುವ ಹಾಗೂ ಅವರ ಹಿತರಕ್ಷಣೆಯ ಕೆಲಸವನ್ನು ಮಾಡಿಕೊಂಡು ಬಂದಿದೆ.

ಇಲ್ಲಿ ಸಾಸ್ ಸದಸ್ಯರಾಗ ಬಯಸುವವರು “ಸೇವಕ್” ಆಗಿ ತಮ್ಮನ್ನು ತಾವು ಸಾಸ್ ಸಂಘಟನೆಯಲ್ಲಿ ನೋಂದಾವಣೆ ಮಾಡಿಕೊಂಡಿರುತ್ತಾರೆ. ತಮ್ಮ ಅಮೂಲ್ಯ ಸಮಯ ಮತ್ತು ಸ್ವಂತ ಹಣದಿಂದ ಸೇವಾ ಮನೋಭಾವವನ್ನು ಇಟ್ಟುಕೊಂಡು ಸಂಘಟನೆಯಲ್ಲಿ ದುಡಿಯುತ್ತಾರೆ.

ಕೇವಲ ಸಂಘಟನೆಯಿಂದ ಮಾತ್ರ ಧರ್ಮ ರಕ್ಷಣೆಯ ಕೆಲಸ ಮಾಡಲು ಸಾಧ್ಯವಿಲ್ಲ ಪ್ರತಿಯೊಬ್ಬ ಹಿಂದೂ ಕೂಡ ಇಂತಹ ವಿಚಾರಗಳಲ್ಲಿ ಜಾಗ್ರತರನಾಗಬೇಕು ಅಯ್ಯಪ್ಪ ಮಾಲೆ ಧಾರಣೆಯ ಪಾವಿತ್ರ್ಯತೆ ಉಳಿಸುವ ಕೆಲಸವನ್ನು ಮಾಡಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!