ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಶನ್‌ಗೆ ಅನುಮತಿ: ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ
ಉಡುಪಿ: ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿದ್ದನ್ನು ವಿರೋಧಿಸಿ ಇಂದು ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಿಂದ ಮೆರವಣಿಗೆ ಮೂಲಕ ಹೊರಟ ನೂರಾರು ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗಿದರು. ಕಾಂಗ್ರೆಸ್ ಭವನದಿಂದ ಅಜ್ಜರಕಾಡು ಹುತಾತ್ಮ ಸ್ಮಾರಕವಾಗಿ ಜೋಡುಕಟ್ಟೆಗೆ ಸಾಗಿಬಂದು ಬ್ರಹ್ಮಗಿರಿ ವೃತ್ತದಲ್ಲಿ ಪ್ರತಿಭಟನಾ ಮೆರವಣಿಗೆ ಸಮಾಪನಗೊಂಡಿತು.
ಮೆರವಣಿಗೆಯುದ್ದಕ್ಕೂ ರಾಜ್ಯಪಾಲರ ನಡೆಯ ವಿರುದ್ಧ ಆಕ್ರೋಶ ಹೊರಹಾಕಿದ ಕಾರ್ಯಕರ್ತರು, ಅವರಿಗೆ ಧಿಕ್ಕಾರ ಕೂಗಿದರು. ರಾಜ್ಯಪಾಲರು ಕೇಂದ್ರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ರಾಜ್ಯಪಾಲರ ವಿರುದ್ಧ ಹರಿಹಾಯ್ದರು.
ಇದೇ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಕೈ ಕಾರ್ಯಕರ್ತರು ಅಕ್ರೋಶವನ್ನು ಹೊರಹಾಕಿದರು. ಬ್ರಹ್ಮಗಿರಿಯಲ್ಲಿ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಜಿಲ್ಲಾ ಮುಖಂಡರಾದ ಅಶೋಕ್ ಕೊಡವುರು ಸಹಿತ ಹಲವು ಮುಖಂಡರು ರಾಜ್ಯಪಾಲರು ಮತ್ತು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ರಾಜ್ಯಪಾಲರ ವಿರುದ್ಧ ಗೋ ಬ್ಯಾಕ್ ಭಿತ್ತಿಪತ್ರ ಪ್ರದರ್ಶಿಸಿ ಅಸಮಾಧಾನವನ್ನು ಹೊರಹಾಕಿದರು.
ಈ ಪಾದಯಾತ್ರೆಯಲ್ಲಿ ಪ್ರಸಾದ್ ರಾಜ್ ಕಾಂಚನ್, ಮುನಿಯಾಲು ಉದಯ ಶೆಟ್ಟಿ, ಗೋಪಾಲ ಪೂಜಾರಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ರಮೇಶ್ ಕಾಂಚನ್, ಕಿಶನ್ ಹೆಗ್ಡೆ, ಜ್ಯೋತಿ ಹೆಬ್ಬಾರ್, ವೆರೋನಿಕ ಕರ್ನೆಲಿಯೋ, ಗೀತಾ ವಾಗ್ಲೆ ಸಹಿತ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.