ವಿದ್ಯುತ್ ದರ ಏರಿಕೆ ಖಂಡನೀಯ: ಅಶೋಕ್ ಕೊಡವೂರು
ಉಡುಪಿ: ಉಪಚುನಾವಣೆ ಮುಗಿಯುತ್ತಿದ್ದಂತೆ ಸರಕಾರ ರಾಜ್ಯದ ಜನತೆಗ ಕರೆಂಟ್ ಶಾಕ್ ನೀಡಿದ್ದು, ವಿದ್ಯುತ್ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿರುವುದು ಖಂಡನೀಯ. ಪ್ರತೀ ಯುನಿಟಿಗೆ ವಿದ್ಯುತ್ ದರ ಸರಾಸರಿ ೪೦ ಪೈಸೆಯಷ್ಟು ಹೆಚ್ಚಳಗೊಳಿಸಲಾಗಿದೆ. ಈಗಾಗಲೇ ಕೋವಿಡ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜನತೆಗೆ ದರ ಏರಿಕೆಯಿಂದ ಇನ್ನಷ್ಟು ಹೊರೆ ಬೀಳಲಿದೆ.
ತನ್ನ ಅಸಮರ್ಪಕ ಆರ್ಥಿಕ ನೀತಿಯಿಂದ ರಾಜ್ಯ ಸರಕಾರ ತನ್ನ ಆದಾಯ ಕೊರತೆಯನ್ನು ನಿವಾರಿಸಲು ಜನರ ಮೇಲೆ ನಿರಂತರ ಬೆಲೆ ಏರಿಕೆಯ ಹೊರೆಯನ್ನು ಹೊರೆಸುತ್ತಿರುವುದು ಸರಕಾರದ ವೈಫಲ್ಯವನ್ನು ತೋರಿಸುತ್ತದೆ. ಈ ನಡುವೆ 30 ಯುನಿಟಿಗೆ ದರ ನಿಗದಿ ಇದ್ದ ಮೊದಲ ಸ್ಲಾಬನ್ನು ೫೦ಕ್ಕೆ ಏರಿಸಬೇಕೆಂಬ ಜನತೆಯ ಬೇಡಿಕೆಯನ್ನು ಸರಕಾರ ತಿರಸ್ಕರಿಸಿದ್ದು, ಸರಕಾರ ಜನರ ಬೇಡಿಕೆಗೆ ಯಾವ ಸ್ಪಂದನೆಯನ್ನೂ ಮಾಡದೆ ಜನ ವಿರೋಧಿ ನಿಲುವನ್ನು ತಾಳುತ್ತಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಸರಕಾರದ ಆಡಳಿತ ವೈಖರಿಯನ್ನು ಟೀಕಿಸಿದ್ದಾರೆ.