ಯು.ಎಸ್.ನಾಯಕ್ ಪ್ರೌಢಶಾಲೆ ಪಟ್ಲ: ಇಂಟರಾಕ್ಟ್ ಪದಗ್ರಹಣ

ಉಡುಪಿ, ಆ.18: ಯು.ಎಸ್. ನಾಯಕ್ ಪ್ರೌಢಶಾಲೆ ಪಟ್ಲ ಇಲ್ಲಿ ರೋಟರಿ ಉಡುಪಿ ನೇತೃತ್ವದಲ್ಲಿ 2024-25ನೇ ಸಾಲಿನ ಇಂಟರಾಕ್ಟ್ ಪದಗ್ರಹಣ ಸಮಾರಂಭ ಆಗಸ್ಟ್ 17 ಶನಿವಾರ ನಡೆಯಿತು. ರೋಟರಿ ಉಡುಪಿ ಅಧ್ಯಕ್ಷರಾದ ಗುರುರಾಜ್ ಭಟ್ ಅವರು ಪದಗ್ರಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡುತ್ತಾ, ನೈತಿಕ ಮೌಲ್ಯಗಳನ್ನೊಳಗೊಂಡ ಶಿಕ್ಷಣ ಪ್ರಸ್ತುತ ಕಾಲಘಟ್ಟದಲ್ಲಿ ಬಹಳ ಅಗತ್ಯವಿದೆ. ರಾಷ್ಟ್ರೀಯತೆಯ ಮನೋಭಾವ ಹೆಚ್ಚಿಸುವ ಶಿಕ್ಷಣದಿಂದ ದೇಶವು ಮತ್ತಷ್ಟು ಬಲಿಷ್ಠ ಮತ್ತು ಸುರಕ್ಷಿತವಾಗುವುದು ಎಂದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಉಪನ್ಯಾಸಕ ಡಾ. ಗಣೇಶ್ ಪ್ರಸಾದ್ ಜಿ. ನಾಯಕ್ ಅವರು, ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಸಂಕಲ್ಪ ಮಾಡಲೇಬೇಕಾದ ಅಗತ್ಯತೆ ಎದುರಾಗಿದೆ. ರಸ್ತೆಯ ಇಕ್ಕೆಲಗಳಲ್ಲಿದ್ದ ಮರಗಳಿಂದ ನೈಸರ್ಗಿಕ ಹವಾನಿಯಂತ್ರಿತ ವ್ಯವಸ್ಥೆ ಮಾತ್ರವಲ್ಲದೇ ಕಾಲಕಾಲಕ್ಕೆ ಸರಿಯಾಗಿ ಮಳೆಯಾಗಿ ಮಣ್ಣಿನ ಫಲವತ್ತತೆ ಕೂಡ ಉತ್ತಮವಾಗಿತ್ತು. ಕೆಲವೇ ನಿಮಿಷಗಳ ಮೂರ್ಖತನದಿಂದ ಮರಗಳನ್ನು ಧರೆಗುರುಳಿಸಿದ್ದರಿಂದ ದೀರ್ಘಕಾಲಿಕ ವ್ಯತಿರಿಕ್ತ ಪರಿಣಾಮಗಳನ್ನು ಅನುಭವಿಸುತ್ತಿದ್ದೇವೆ. ಮಡಿಕೇರಿ ಭೂಕುಸಿತದಿಂದ ನಾವು ಬುದ್ದಿ ಕಲಿಯಲಿಲ್ಲ, ಇದೀಗ ಪ್ರಕೃತಿ ಸರಣಿ ಭೂಕುಸಿತಗಳ ಮೂಲಕ ಮತ್ತೊಮ್ಮೆ ನಮಗೆ ಎಚ್ಚರಿಸಿದೆ. ಇನ್ನಾದರೂ ಪಾಠ ಕಲಿಯದಿದ್ದರೆ ಮುಂದೆ ಕರಾಳ ಚಿತ್ರ ಅನಾವರಣಗೊಳ್ಳಲಿದೆ ಎಂದರು.

ಮುಖ್ಯೋಪಾಧ್ಯಾಯರಾದ ನಟರಾಜ್ ಎಚ್.ಎನ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತಾಧಿಕಾರಿ ವಿ.ಜಿ. ಬೈಕಾಡಿ ಶುಭ ಹಾರೈಸಿದರು. ಅಕ್ಷರ ದಾಸೋಹ ಕಾರ್ಯಕ್ರಮಕ್ಕೆ ನಿವೃತ್ತ ಬ್ಯಾಂಕ್ ಅಧಿಕಾರಿ ಕೆ. ಕಮಲಾಕರ ನಾಯಕ್ ಅವರು ನೀಡಿದ ಮಿಕ್ಸರ್ ಗ್ರೈಂಡರ್ ಕೊಡುಗೆಯನ್ನು ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಲಾಯಿತು. ನೂತನ ಇಂಟರಾಕ್ಟ್ ಅಧ್ಯಕ್ಷರಾಗಿ ಶಮಿತಾ, ಕಾರ್ಯದರ್ಶಿ ಸೃಜನ್ ಆಯ್ಕೆಯಾದರು. ನಿಕಟಪೂರ್ವ ಅಧ್ಯಕ್ಷ ಚಿದಾನಂದ ಸ್ವಾಗತಿಸಿ, ನಿಕಟಪೂರ್ವ ಕಾರ್ಯದರ್ಶಿ ಸೀತಾ ವರದಿ ವಾಚಿಸಿದರು. ರೋಟರಿ ಸದಸ್ಯರಾದ ಶುಭಲಕ್ಷ್ಮೀ, ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶರಣ್ಯ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!