ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿ: ಆ.27ಕ್ಕೆ ಹುಲಿವೇಷ ಸ್ಪರ್ಧೆ- ಪುತ್ತಿಗೆ ಶ್ರೀ
ಉಡುಪಿ: ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಮಾಸೋತ್ಸವದಲ್ಲಿ ವಿವಿಧ ಆಕರ್ಷಕ ಸಾಂಪ್ರದಾಯಿಕ ಸ್ಪರ್ಧೆಗಳನ್ನು ಆ.27 ರಂದು ಸಂಜೆ 4ಗಂಟೆಗೆ ರಾಜಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಪರ್ಯಾಯ ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಲಿವೇಷ ಸ್ಪರ್ಧೆಯಲ್ಲಿ ವಿಜೇತ ತಂಡಕ್ಕೆ ಪ್ರಥಮ 1.15ಲಕ್ಷ ರೂ. ವೌಲ್ಯದ ಟಿವಿಎಸ್ ಎಲೆಕ್ಟ್ರಿಕಲ್ ಸ್ಕೂಟರ್, ದ್ವಿತೀಯ 50ಸಾವಿರ ರೂ., ತೃತೀಯ 25ಸಾವಿರ ರೂ., ಜಾನಪದ ವೇಷ ಸ್ಪರ್ಧೆಯಲ್ಲಿ ಪ್ರಥಮ 25ಸಾವಿರ ರೂ., ದ್ವಿತೀಯ 15 ಸಾವಿರ ರೂ., ತೃತೀಯ 10ಸಾವಿರ ರೂ., ಪೌರಾಣಿಕ ನೃತ್ಯ ಸ್ಪರ್ಧೆಯ ವಿಜೇತರಿಗೆ ಪ್ರಥಮ 30ಸಾವಿರ ರೂ., ದ್ವಿತೀಯ 20ಸಾವಿರ ರೂ., ತೃತೀಯ 10ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಸ್ಪರ್ಧೆಗಳಲ್ಲಿ ಭಾಗವಹಿಸುವ ತಂಡಗಳು ಕೇಶವ ಆಚಾರ್ಯ (ಮೊ-99160 09660)/ರತ್ನಾಕರ ಇಂದ್ರಾಳಿ (ಮೊ-9880213650) ಅವರನ್ನು ನೋಂದಣಿ ಗಾಗಿ ಸಂಪರ್ಕಿಸಬಹುದು ಎಂದರು.
ಆ.18ರಂದು ಬೆಳಗ್ಗೆ 9.30ರಿಂದ ಉಡುಪಿ ರಥಬೀದಿಯಲ್ಲಿ ಇತ್ತೀಚೆಗೆ ಅಳಿದು ಹೋಗುತ್ತಿರುವ ಆಟೋಟಗಳನ್ನು ನೆನಪಿಸಿಕೊಳ್ಳುವ ನಿಟ್ಟಿನಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆಯುವುದು, ಸೊಪ್ಪಿನ ಆಟ, ಜುಬಿಲಿ, ಸೈಕಲ್ ಚಲಾಯಿಸುವುದು, ಕಾಳುಗಳ ವಿಂಗಡಿಸುವಿಕೆ, ಬಂಡಿ ಓಟ, ನಿಧಾನಗತಿಯ ಸೈಕಲ್ ರೇಸ್, ಬೆಲ್ಚೆಂಡು, ತಟ್ಟೆ ಓಟ, ನಡಿಗೆ, ಹಗ್ಗಗಂಟು ಹಾಕುವಿಕೆ, ಟೊಂಕ ಆಟ, ದೇವರ ನಾಮದಿಂದ ಆಟ, ಗೋಣಿಚೀಲ ಓಟ, ವಿಶಲ್ ಚೇರ್ ಸ್ಪರ್ಧೆ ಗಳನ್ನು ಏರ್ಪಡಿಸಲಾಗಿದೆ. ಆ.22ರಿಂದ ಗೀತಾ ಮಂದಿರದಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.