ಉಡುಪಿ: ಪರೀಕ್ಷೆ ಮುಂದೂಡಲು ಕರ್ನಾಟಕ ರಾಷ್ಟ್ರ ಸಮಿತಿ ಆಗ್ರಹ
ಉಡುಪಿ : ದಿನೇ ದಿನೇ ಹೆಚ್ಚುತ್ತಿರುವ ಕೋವಿ ಮಾರಕ ರೋಗದಿಂದ ದೇಶವೇ ಆತಂಕದ ಪರಿಸ್ಥಿತಿಯಲ್ಲಿದೆ. ಇದರ ನಡುವೆ ರಾಜ್ಯ ಸರಕಾರ ಇದೇ ತಿಂಗಳ 18 ಮತ್ತು 25 ರಂದು ಪಿಯುಸಿ ಹಾಗೇನೇ ಎಸ್ಸೆಸೆಲ್ಸಿ ಪರೀಕ್ಷೆಗೆ ದಿನ ನಿಗದಿ ಮಾಡಿದ್ದು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆಯನ್ನು ಮುಂದೂಡಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ರಾಜ್ಯ ಸರಕಾರವನ್ನು ಆಗ್ರಹಿಸಿದೆ.
ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯ ಉಪಾಧ್ಯಕ್ಷ ಅಮೃತ್ ಶೆಣೈ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಘಟಕದ ಪ್ರಮುಖ ಪದಾಧಿಕಾರಿಗಳು ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಮೂಲಕ ರಾಜ್ಯದ ಶಿಕ್ಷಣ ಸಚಿವರಿಗೆ ಮನವಿಯನ್ನೂ ಸಲ್ಲಿಸಿದ್ದಾರೆ.
ಕೋರನ ಹಾವಳಿಯಿಂದ ರಾಜ್ಯದಲ್ಲಿಯೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದಂತಾಗುತ್ತದೆ. ಮುಂದಿನ ಪ್ರಜೆಗಳ ಆರೋಗ್ಯ ನಮಗೆ ಇತರ ಎಲ್ಲ ವಿಚಾರಗಳಿಗಿಂತ ಬಹುಮುಖ್ಯ ಆಗಿರುವುದರಿಂದ, ನಾಡಿನ ಮಕ್ಕಳಿಗೆ ತೊಂದರೆ ಆದರೆ ಅದರ ಸಂಪೂರ್ಣ ಜವಾಬ್ದಾರಿ ಸರಕಾರ ವಹಿಸಬೇಕು. ಸಾಮಾಜಿಕ ಅಂತರದ ಪಾಲನೆ ಕೂಡ ಸರಿಯಾಗಿ ಆಗದಿರುವುದರಿಂದ, ಪರೀಕ್ಷಾ ಕೇಂದ್ರದ ಶುಚಿತ್ವ ಮತ್ತು ಶೌಚಾಲಯ ವ್ಯವಸ್ಥೆಗಳ ನಿರ್ವಹಣೆ ಸರಿಯಾಗಿರದ ಕಾರಣ ಹಾಗೂ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯು ತೀರಾ ಕಡಿಮೆ ಇರುವ ಕಾರಣ ಸೋಂಕು ತಗುಲುವ ಸಾಧ್ಯತೆ ಇರುತ್ತದೆ.
ಆದ್ದರಿಂದ ತಾವುಗಳು ಈ ನಿರ್ಧಾರವನ್ನು ಪರಿಶೀಲಿಸಿ ತಕ್ಷಣ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿ ಮುಂದೂಡಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ ಉಡುಪಿ ಘಟಕ ಜಿಲ್ಲಾಧಿಕಾರಿ ಕಚೇರಿಯ ಮೂಲಕ ಸಲ್ಲಿಸಿದ ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಅಮೃತ್ ಶೆಣೈ, ಉಡುಪಿ ಜಿಲ್ಲಾ ಉಪಾಧ್ಯಕ್ಷ ಪ್ರಸಾದ್ ಕರ್ಕಡ, ನಗರ ಘಟಕಾಧ್ಯಕ್ಷ ಯಜ್ಞೇಶ್ ಆಚಾರ್ಯ, ಕಾರ್ಯದರ್ಶಿ ವಿನುತ ಕಿರಣ್, ಪ್ರಮುಖರಾದ ಅರವಿಂದ ನಾಯಕ್, ಅಹಮದ್, ಸರ್ಫರಾಜ್, ರಾಮದಾಸ್ ಪೈ, ಅಮೃತ್ ಸಾಲ್ವಂಕರ್, ದಿನೇಶ್ ರಾಮ್, ಸಫನ್, ರಫೀಕ್ ಮತ್ತಿತರರು ಉಪಸ್ಥಿತರಿದ್ದರು.