ಮತ್ಸ್ಯಗಂಧ ರೈಲು ಪಡುಬಿದ್ರಿಯಲ್ಲಿ ನಿಲುಗಡೆಗೆ ರೈಲ್ವೆ ಸಚಿವರಿಗೆ ಮನವಿ
ಪಡುಬಿದ್ರಿ-ಪಣಿಯೂರು ರೈಲ್ವೆ ನಿಲ್ದಾಣದಲ್ಲಿ ಮಂಗಳೂರು-ಕುರ್ಲಾ(ಬಾಂಬೆ) ಮತ್ಸ್ಯಗಂಧ ರೈಲಿಗೆ ನಿಲುಗಡೆಗೆ ನೀಡುವಂತೆ ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದ ನಿಯೋಗ ಮನವಿ ಸಲ್ಲಿಸಿದೆ.
ಪಡುಬಿದ್ರಿ- ಪಣಿಯೂರು ರೈಲ್ವೆ ನಿಲ್ದಾಣದಲ್ಲಿ ಮಂಗಳೂರು – ಕುರ್ಲಾ(ಬಾಂಬೆ) ರೈಲಿಗೆ ನಿಲುಗಡೆಗೆ ಅವಕಾಶವಿಲ್ಲದೆ, ಸಾರ್ವಜನಿಕರು ತೊಂದರೆಗೆ ಈಡಾಗಿದ್ದಾರೆ. ಪಡುಬಿದ್ರಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ಹೆಜಮಾಡಿ, ಎರ್ಮಾಳು, ತೆಂಕ, ಬೆಳಪು, ಶಿರ್ವ, ಮುದರಂಗಡಿ ಹಾಗೂ ಕಾರ್ಕಳದ ಕಡೆಯಿಂದ ನೂರಾರು ಜನರು ಬಾಂಬೆಯಿಂದ ಪ್ರಯಾಣಿಸುವರಿಗೆ ಪಡುಬಿದ್ರಿ-ಮಣಿಯೂರು ರೈಲ್ವೆ ನಿಲ್ದಾಣದಲ್ಲಿ ಮತ್ಸ್ಯಗಂಧ ರೈಲಿಗೆ ನಿಲುಗಡೆ ಇಲ್ಲದೆ ಇರುವುದರಿಂದ ದೂರದ ಮೂಲ್ಕಿ ಹಾಗೂ ಉಡುಪಿ ಇಂದ್ರಾಳಿಯಲ್ಲಿ ಸಾರ್ವಜನಿಕರು ಇಳಿದು ತಮ್ಮ ಸ್ವಂತ ಊರಿಗೆ ತೆರಳಲು ಸಂಕಷ್ಟಪಡುತ್ತಿದ್ದಾರೆ. ಆದ್ದರಿಂದ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಡುಬಿದ್ರಿ- ಪಣಿಯೂರು ರೈಲ್ವೆ ನಿಲ್ದಾಣದಲ್ಲಿ ಮಂಗಳೂರು-ಕುರ್ಲಾ(ಬಾಂಬೆ) ಮತ್ಸ್ಯಗಂಧ ರೈಲ್ವೆ ನಿಲುಗಡೆಗೆ ಅವಕಾಶ ಕಲ್ಪಿಸುವಲ್ಲಿ ಸೂಕ್ತ ಕ್ರಮ ವಹಿಸುವಂತೆ ರಾಜ್ಯ ಖಾತೆ ರೈಲ್ವೆ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.
ಈ ಸಂದರ್ಭ ಮಾಜಿ ಶಾಸಕ ಲಾಲಾಜಿ ಮೆಂಡನ್, ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಕಾಪು ಪುರಸಭೆ ಸದಸ್ಯರಾದ ಹರಿಣಾಕ್ಷಿ, ಶೈಲೇಶ್, ರತ್ನಾಕರ್, ಉಡುಪಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಗೀತಾಂಜಲಿ ಸುವರ್ಣ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.