ಆ. 24-25: ತೆಂಕುತಿಟ್ಟು ಯಕ್ಷಮಾರ್ಗ ಶಿಬಿರ- ಯಕ್ಷಗಾನ ಪ್ರದರ್ಶನದ ಆಮಂತ್ರಣ ಪತ್ರಿಕೆ ಬಿಡುಗಡೆ
ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು, ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ,ಕಾಸರಗೋಡು ಇವರ ಸಹಕಾರದೊಂದಿಗೆ ಇದೇ ಬರುವ ಆಗಸ್ಟ್ 24 ಶನಿವಾರ ಮತ್ತು ಆಗಸ್ಟ್ 25ರ ಭಾನುವಾರ ಎರಡು ದಿನಗಳ ತೆಂಕುತಿಟ್ಟು ಯಕ್ಷಮಾರ್ಗ ಶಿಬಿರ-ಯಕ್ಷಗಾನ ಪ್ರದರ್ಶನ ಕಾಸರಗೋಡು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ.
ಸದ್ರಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಮಂಗಳೂರಿನ ತುಳು ಭವನದಲ್ಲಿ ಅಕಾಡೆಮಿ ಸರ್ವ ಸದಸ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು. ಆಗಸ್ಟ್ 24ರ ಬೆಳಿಗ್ಗೆ 10.30 ಕ್ಕೆ ಕರ್ನಾಟಕ ವಿಧಾನಸಭಾ ಸಭಾಧ್ಯಕ್ಷರಾದ ಸನ್ಮಾನ್ಯ ಯು.ಟಿ.ಖಾದರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ತ್ರ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಜೇಶ್ವರ ವಿಧಾನಸಭಾ ಶಾಸಕರಾದ ಎ. ಕೆ. ಆಶ್ರಫ್, ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ ಭಾಗವಹಿಸಲಿದ್ದಾರೆ. ತೆಂಕುತಿಟ್ಟು ಯಕ್ಷಗಾನದ ಶಾಸ್ತ್ರೀಯ ನಾಟ್ಯ ಗುರುಗಳಾದ ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ ಇವರಿಂದ ಶಾಸ್ತ್ರೀಯ ನಾಟ್ಯ ಪ್ರಾತ್ಯಕ್ಷಿಕೆ ನಡೆಯಲಿದೆ.
ಆಗಸ್ಟ್ 25 ಭಾನುವಾರ ಬೆಳಿಗ್ಗೆ 10:30 ಕ್ಕೆ ಶಿಬಿರಾರ್ಥಿಗಳಿಗೆ ಅಭ್ಯಾಸ ಶಿಬಿರ ನಡೆಯಲಿದೆ. ಬಳಿಕ ಯಕ್ಷ ಬಳಗ ಹೊಸಂಗಡಿ ಇವರಿಂದ ತಾಳಮದ್ದಳೆ ‘ಶರಸೇತು ಬಂಧನ’ ಪ್ರದರ್ಶನಗೊಳ್ಳಲಿದೆ. ಅಪರಾಹ್ನ 3 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕಾಸರಗೋಡು ವಿಧಾನಸಭಾ ಕ್ಷೇತ್ರದ ಎನ್ ಎ ನೆಲ್ಲಿಕುನ್ನು ಹಾಗೂ ಕೆ.ವಿ ರಮೇಶ್ ಕಾಸರಗೋಡು ಭಾಗವಹಿಸಲಿದ್ದಾರೆ. ಬಳಿಕ ಸಂಜೆ 5ಗಂಟೆಗೆ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಇವರಿಂದ ಭಕ್ತ ಪ್ರಹ್ಲಾದ ಯಕ್ಷಗಾನ ಪ್ರದರ್ಶನ ಗೊಳ್ಳಲಿದೆ.
ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ರಾಘವ ಹೆಚ್,ಕೃಷ್ಣಪ್ಪ ಪೂಜಾರಿ ಕೀನ್ಯ, ಗುರುರಾಜ್ ಭಟ್, ವಿನಯ್ ಕುಮಾರ್ ಶೆಟ್ಟಿ, ವಿಜಯ್ ಕುಮಾರ್ ಶೆಟ್ಟಿ, ಮೋಹನ್ ಕೊಪ್ಪಾಳ್, ಸತೀಶ್ ಅಡಪ್ಪ ಸಂಕಬೈಲ್, ರಾಜೇಶ್ ಕುಲಾಯಿ, ದಯಾನಂದ ಪಿ ಬೆಳಾಲ್, ಜಿ. ವಿ. ಎಸ್ ಉಳ್ಳಾಲ್ ಪ್ರಥ್ವಿ ರಾಜೇಶ್ ಕುಮಾರ್ ಎಸ್ ಕೆ ಉಪಸ್ಥಿತರಿದ್ದರು.