ಸರಕಾರಗಳ ದುರಾಡಳಿತದಿಂದ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ: ಡಾ.ಪಿ.ವಿ. ಭಂಡಾರಿ

ಉಡುಪಿ, ಆ.15: ನಮಗೆ 78 ವರ್ಷಗಳ ಹಿಂದೆ ಸ್ವಾತಂತ್ರ್ಯ ಸಿಕ್ಕಿದ್ದರೂ, ಈ ಸರಕಾರಗಳ ದುರಾಡಳಿತದಿಂದ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಹಿರಿಯ ಮನೋ ವೈದ್ಯ ಡಾ.ಪಿ.ವಿ.ಭಂಡಾರಿ ಹೇಳಿದ್ದಾರೆ.

ದೇಶದ ಸ್ವಾತಂತ್ರ್ಯ ಪ್ರಜಾಪ್ರಭುತ್ವ ಸಂವಿಧಾನದ ಸಂರಕ್ಷಣೆಗಾಗಿ, ಕಾರ್ಮಿಕ ವರ್ಗದ ಹಕ್ಕುಗಳ ಉಳಿವಿಗಾಗಿ, ಕೇಂದ್ರ ಸರಕಾರದ ಕಾರ್ಪೊರೇಟ್ ಪರ ನೀತಿಗಳನ್ನು ಹಿಮ್ಮೆಟ್ಟಿಸಲು ಸಿಐಟಿಯು, ಎಐಎಡಬ್ಲ್ಯುಯು ಹಾಗೂ ಎಐಕೆಎಸ್ ಉಡುಪಿ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನವಾದ ಬುಧವಾರ ಉಡುಪಿ ನಗರದ ಹಳೆ ಸರಕಾರಿ ಬಸ್ ನಿಲ್ದಾಣ ಬಳಿ ಹಮ್ಮಿಕೊಳ್ಳಲಾದ ಅಹೋರಾತ್ರಿ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸರಕಾರಗಳು ಉಡುಪಿ ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಿದೆ. ಈ ಜಿಲ್ಲೆಗೆ ಪೂರ್ಣಪ್ರಮಾಣದ ಸರಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡುವಲ್ಲಿ ಎರಡೂ ರಾಜಕೀಯ ಪಕ್ಷಗಳು ಕೂಡ ಸಂಪೂರ್ಣ ವಿಫಲವಾಗಿದೆ. ಉಡುಪಿ ಜಿಲ್ಲೆಯ ಬಡವರು ಏನು ತಪ್ಪು ಮಾಡಿದ್ದಾರೆ. ಅವರಿಗೆ ಆರೋಗ್ಯ ತೊಂದರೆ ಬಂದಾಗ ಎಲ್ಲಿಗೆ ಹೋಗಬೇಕು ಎಂದು ಅವರು ಪ್ರಶ್ನಿಸಿದರು.

ಈ ವಿಚಾರದಲ್ಲಿ ಪಕ್ಷಪಾತ ಮಾಡದೇ ಇಲ್ಲಿನ ಸಂಸದರು ಹಾಗೂ ಶಾಸಕರು ಉಡುಪಿ ಜಿಲ್ಲೆಗೆ ಪೂರ್ಣಪ್ರಮಾಣದ ಸರಕಾರಿ ವೈದ್ಯಕೀಯ ಹಾಗೂ ಇಂಜಿ ನಿಯರ್ ಕಾಲೇಜು ಸ್ಥಾಪಿಸಬೇಕು. ಅಲ್ಲದೇ 150-200ಬೆಡ್‌ಗಳ ಇಎಸ್‌ಐ ಆಸ್ಪತ್ರೆಯನ್ನು ನಿರ್ಮಿಸಬೇಕು ಎಂದು ಅವರು ಒತ್ತಾಯಿಸಿದರು.

ಧರಣಿಯಲ್ಲಿ ಸಿಐಟಿಯು ಮುಖಂಡರಾದ ಕೆ.ಶಂಕರ್, ಬಾಲಕೃಷ್ಣ ಶೆಟ್ಟಿ, ಕವಿರಾಜ್, ಎಚ್.ನರಸಿಂಹ, ಬಲ್ಕೀಸ್, ಸುರೇಶ್ ಕಲ್ಲಾಗರ್, ಶಶಿಧರ್ ಗೊಲ್ಲ, ದಸಂಸ ಮುಖಂಡರಾದ ಸುಂದರ್ ಮಾಸ್ತರ್, ಜಯನ್ ಮಲ್ಪೆ, ಶಂಕರ್‌ದಾಸ್ ಚೇಂಡ್ಕಲ, ಆಟೋ ರಿಕ್ಷಾ ಮತ್ತು ವಾಹನ ಚಾಲಕ ಸಂಘದ ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ ಮೊದಲಾದವರು ಹಾಜರಿದ್ದರು.

ಸಂಜೆ 6.30ರಿಂದ ಮಧ್ಯರಾತ್ರಿ12ಗಂಟೆಯವರೆಗೆ ಧರಣಿ ನಡೆದಿದ್ದು, ನಂತರ ಕಛೇರಿಯಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಲಾಯಿತು.

Leave a Reply

Your email address will not be published. Required fields are marked *

error: Content is protected !!