ಉಡುಪಿ: ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ದೌರ್ಜನ್ಯವಿರೋಧಿಸಿ ಮಾನವ ಸರಪಳಿ ರಚಿಸಿ ಪ್ರತಿಭಟನೆ

ಉಡುಪಿ, ಆ.13: ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾತ್ಮಕ ಆಕ್ರಮಣವನ್ನು ವಿರೋಧಿಸಿ ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಇಂದು ಉಡುಪಿ ನಗರದಲ್ಲಿ ಮಾನವ ಸರಪಳಿ ಮೂಲಕ ಪ್ರತಿಭಟನೆ ನಡೆಸಲಾಯಿತು.

ಉಡುಪಿ ಸಿಟಿ ಬಸ್ ನಿಲ್ದಾಣದಿಂದ ಕಡಿಯಾಳಿಯವರೆಗೆ ರಸ್ತೆ ಬದಿಯಲ್ಲಿ ಮಾನವ ಸರಪಳಿಯನ್ನು ರಚಿಸಿ ಪ್ಲೇ ಕಾರ್ಡುಗಳನ್ನು ಪ್ರದರ್ಶಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಮುಖಂಡರಾದ ವೀಣಾ ಶೆಟ್ಟಿ, ಸಂಧ್ಯಾ ರಮೇಶ್, ರಾಜೇಶ್ ಕಾವೇರಿ, ಸುಪ್ರಸಾದ್ ಶೆಟ್ಟಿ ಬೈಕಾಡಿ, ಮಟ್ಟಾರು ರತ್ನಾಕರ ಹೆಗ್ಡೆ, ವಿಜಯ ಕೊಡವೂರು, ಶ್ಯಾಮಲಾ ಕುಂದರ್, ನಯನ ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.

ಬಾಂಗ್ಲಾ ಹಿಂದೂಗಳ ಮೇಲಿನ ಮುಸ್ಲಿಂ ಮೂಲಭತವಾದಿಗಳ ದೌರ್ಜನ್ಯವನ್ನು ಒಕ್ಕೊರಲಿನಿಂದ ಖಂಡಿಸೋಣ: ಯಶ್ಪಾಲ್ ಸುವರ್ಣ

ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ಥಿರತೆಯಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಮುಸ್ಲಿಂ ಮತೀಯವಾದಿಗಳು ಬಾಂಗ್ಲಾದ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ರಾಷ್ಟೀಯವಾದಿ ಭಾರತೀಯರು ಒಕ್ಕೊರಲಿನಿಂದ ಖಂಡಿಸುವಂತೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ.

ಹಿಂದೂ ದೇವಸ್ಥಾನ, ಆರಾಧನಾ ಕೇಂದ್ರಗಳ ಮೇಲೆ ಧಾಳಿ, ಹಿಂದೂ ಧರ್ಮೀಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸುತ್ತಾ ಹಿಂದೂ ವಿರೋಧಿ ನೀತಿ ನಡೆಸುತ್ತಿರುವ ಮತಾಂಧ ಶಕ್ತಿಗಳ ವಿರುದ್ಧ ಬಾಂಗ್ಲಾ ಸರಕಾರ ತಕ್ಷಣ ಕಠಿಣ ಕ್ರಮಕೈಗೊಂಡು ಹಿಂದೂಗಳ ರಕ್ಷಣೆಗೆ ಕಾರ್ಯಪ್ರವೃತ್ತರಾಗಬೇಕು.

ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಚಿಕ್ಕ ಘಟನೆ ನಡೆದ ಕೂಡಲೇ ಬೀದಿಗಿಳಿಯುವ ಎಡಪಂಥೀಯ, ಜಾತ್ಯತೀತ ಮುಖವಾಡ ತೊಟ್ಟ ಬುದ್ಧಿಜೀವಿಗಳು, ಬಾಂಗ್ಲಾ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಚಕಾರ ಎತ್ತುತ್ತಿಲ್ಲ. ಹಿಂದೂಗಳ ಮೇಲಿನ ಧಾಳಿಯ ಬಗ್ಗೆ ದಿವ್ಯ ಮೌನ ವಹಿಸುವ ಮೂಲಕ ಪ್ರಗತಿಪರರು ಐಸಿಸ್ ಮನಸ್ಥಿತಿಯ ಮತೀಯ ಶಕ್ತಿಗಳಿಗೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ.

ಬಾಂಗ್ಲಾ ಹಿಂದೂಗಳ ರಕ್ಷಣೆಗೆ ಕೇಂದ್ರ ಸರ್ಕಾರ ಈಗಾಗಲೇ ಕಾರ್ಯಪ್ರವೃತ್ತವಾಗಿದ್ದು, ಹಿಂದೂಗಳ ವಿರುದ್ದ ಧಾಳಿ ಮಾಡುತ್ತಿರುವ ಮತೀಯ ಶಕ್ತಿಗಳಿಗೆ ತಕ್ಕ ಉತ್ತರ ನೀಡಬೇಕಾದ ಅನಿವಾರ್ಯ ಸನ್ನಿವೇಶ ನಿರ್ಮಾಣವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!