ಶಿವಮೊಗ್ಗದಲ್ಲೂ ಈ ಬಾರಿ ಕಂಬಳ: ಅ.26 ರಂದು ಬೆಂಗಳೂರಿನಲ್ಲಿ ಚಾಲನೆ

ಮೂಡುಬಿದಿರೆ, ಆ.11: ಈ ಬಾರಿ ಕಂಬಳ ಋತು ಬೆಂಗಳೂರಿನಲ್ಲಿ ಅ.26ರಂದು ಕಂಬಳ ನಡೆಯುವ ಮೂಲಕ ಆರಂಭವಾಗಲಿದೆ. ಅಲ್ಲದೇ, ಇದೇ ಮೊದಲ ಬಾರಿ ಶಿವಮೊಗ್ಗದಲ್ಲೂ ಕಂಬಳ ಆಯೋಜಿಸಲು ದ.ಕ. ಜಿಲ್ಲಾ ಕಂಬಳ ಸಮಿತಿ ನಿನ್ನೆ ಮೂಡುಬಿದಿರೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ, ಬೆಂಗಳೂರಿನಲ್ಲಿ ಮೊದಲ ಕಂಬಳ ಅಕ್ಟೋಬರ್ 26ರಂದು ನಡೆಯಲಿದೆ. ಕೊನೆಯ ಕಂಬಳವನ್ನು 2025ರ ಎಪ್ರಿಲ್ 19ರಂದು ಶಿವಮೊಗ್ಗದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಈ ವರ್ಷ ಒಟ್ಟು 26 ಕಂಬಳಗಳನ್ನು ನಡೆಸಲಾಗುವುದು, ಮಂಗಳೂರಿನ ಪಿಲಿಕುಳ ಕಂಬಳಕ್ಕೆ ಮತ್ತೆ ಚಾಲನೆ ನೀಡಲಾಗುವುದು’ ಎಂದರು.

‘ಕಂಬಳಗಳು ಈಚೆಗೆ ಶಿಸ್ತುಬದ್ಧವಾಗಿ ನಡೆಯುತ್ತಿದ್ದು, ಕರಾವಳಿಯ ಈ ಕ್ರೀಡೆಯನ್ನು ಹೆಚ್ಚು ಆಕರ್ಷಕವಾಗಿಸ ಲು ನಿಯಮಗಳನ್ನು ಬಿಗಿ ಮಾಡಲಾಗಿದೆ. ಆಯಾ ಕಂಬಳ ಸಮಿತಿಗಳು ಕಡ್ಡಾಯವಾಗಿ ಪಾಲಿಸ ಬೇಕಾಗಿರುವ ನಿಯಮಾವಳಿಗಳನ್ನು ಶೀಘ್ರದಲ್ಲೇ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.

ಪಿಲಿಕುಳ ಕಂಬಳದಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ನಾಲ್ಕು ದಿನ ‘ತುಳುನಾಡ ವೈಭವ’ ಕಾರ್ಯಕ್ರಮ ನಡೆಯಲಿದೆ. ಕಂಬಳಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶನ ಏರ್ಪಡಿಸಲಾಗುವುದು ಎಂದರು.

ದ.ಕ. ಜಿಲ್ಲೆಯಲ್ಲಿ ನಡೆಯುವ 24 ಕಂಬಳಗಳಿಗೆ ತಲಾ 5 ಲಕ್ಷ ರೂ. ಅನುದಾನ ನೀಡುವಂತೆ ಸರಕಾರವನ್ನು ಕೋರಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ಎರ್ಮಾಳ್ ರೋಹಿತ್ ಹೆಗ್ಡೆ, ಉಪಾಧ್ಯಕ್ಷರಾದ ನವೀನಚಂದ್ರ ಆಳ್ವ, ಶ್ರೀಕಾಂತ ಭಟ್, ಸಂದೀಪ ಶೆಟ್ಟಿ, ಪ್ರಶಾಂತ ಕಾಜವ, ರಶ್ಮಿತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಮುಚ್ಚೂರು, ಕೋಶಾಧಿಕಾರಿ ಚಂದ್ರಹಾಸ ಸನಿಲ್, ತೀರ್ಪುಗಾರರ ಸಂಚಾಲಕ ವಿಜಯ ಕುಮಾರ್ ಕಂಗಿನಮನೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!