ಸಕಲೇಶಪುರ ಬಳಿ ಗುಡ್ಡ ಕುಸಿತ: ಕಾರವಾರ-ಬೆಂಗಳೂರು ರೈಲು ಸಂಚಾರ ರದ್ದು
ಉಡುಪಿ, ಆ.10: ಮೈಸೂರು ವಿಭಾಗದ ನೈರುತ್ಯ ರೈಲ್ವೆ ಮಾರ್ಗದ ಸಕಲೇಶಪುರ ಬಾಳ್ಳುಪೇಟೆ ಬಳಿ ಶುಕ್ರವಾರ ತಡರಾತ್ರಿ ಗುಡ್ಡ ಕುಸಿತ ಸಂಭವಿಸಿದ ಕಾರಣ, ಒಂದು ದಿನದ ಮೊದಲಷ್ಟೇ ಪುನರಾರಂಭಗೊಂಡಿದ್ದ ಮಂಗಳೂರು-ಬೆಂಗಳೂರು ರೈಲು ಸಂಚಾರಗಳು ಮತ್ತೆ ರದ್ದುಗೊಂಡಿವೆ.
ಈ ಹಿನ್ನೆಲೆಯಲ್ಲಿ ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ಕಾರವಾರ- ಬೆಂಗಳೂರು ನಡುವಿನ ಹಲವು ರೈಲುಗಳ ಸಂಚಾರ ಕೆಲದಿನಗಳ ಮಟ್ಟಿಗೆ ಮತ್ತೆ ರದ್ದಾಗಿದ್ದು, ಇನ್ನು ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಆ.9 ರಂದು ಬೆಂಗಳೂರಿನಿಂದ ಹೊರಟಿದ್ದ ರೈಲು ನಂ. 16585 ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ನಿಲ್ದಾಣ ಹಾಗೂ ಮುರ್ಡೇಶ್ವರ ನಡುವಿನ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಹಾಸನದಲ್ಲೇ ನಿಲ್ಲಿಸಲಾಗಿದೆ. ಹೀಗಾಗಿ ಹಾಸನ ಹಾಗೂ ಮುರ್ಡೇಶ್ವರ ನಡುವಿನ ಸಂಚಾರ ರದ್ದಾಗಿದೆ.
ಆ.10 ರೈಲು ನಂ.16585 ಸರ್ ಎಂ.ವಿಶ್ವೇಶರಯ್ಯ ಬೆಂಗಳೂರು- ಮುರುಡೇಶ್ವರ ಎಕ್ಸ್‌ಪ್ರೆಸ್, ರೈಲು ನಂ. 16586 ಮುರ್ಡೇಶ್ವರ – ಸರ್ ಎಂ.ವಿಶ್ವೇಶ್ವರಯ್ಯ ಬೆಂಗಳೂರು ಎಕ್ಸ್‌ಪ್ರೆಸ್, ರೈಲು ನಂ.16595 ಕೆಎಸ್‌ಆರ್ ಬೆಂಗಳೂರು-ಕಾರವಾರ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ.
ಆ.9ರಂದು ಮುರ್ಡೇಶ್ವರದಿಂದ ಹೊರಟಿದ್ದ ರೈಲು ನಂ.16586 ಮುರ್ಡೇಶ್ವರ-ಸರ್ ಎಂ.ವಿಶ್ವೇಶ್ವರಯ್ಯ ಬೆಂಗಳೂರು ಎಕ್ಸ್‌ಪ್ರೆಸ್, ಕಾರವಾರದಿಂದ ಹೊರಟಿದ್ದ ರೈಲು ನಂ.16596 ಕಾರವಾರ- ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಸಕಲೇಶಪುರದಲ್ಲೇ ತಡೆ ಹಿಡಿದಿದ್ದು, ಸಕಲೇಶಪುರ-ಬೆಂಗಳೂರು ನಡುವಿನ ಸಂಚಾರ ರದ್ದಾಗಿದೆ.
ಇಂದು ಕಾರವಾರದಿಂದ ಹೊರಟಿದ್ದ ರೈಲು ನಂ. 16516 ಕಾರವಾರ- ಯಶವಂತಪುರ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಸಕಲೇಶಪುರದಲ್ಲಿ ಕೊನೆಗೊಳಿಸಿದ್ದರೆ, ರೈಲು ನಂ.16596 ಕಾರವಾರ- ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.