ಯಕ್ಷಗಾನ ಬೆಳವಣಿಗೆಗೆ ಧಾರ್ಮಿಕ ಸಂಸ್ಥೆಗಳ ಸಹಕಾರ ಅತ್ಯಗತ್ಯ: ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ

ಉಡುಪಿ:  ಯಕ್ಷಗಾನ ಪರಂಪರೆಯ ಉಳಿವು, ಬೆಳವಣಿಗೆಗೆ ಧಾರ್ಮಿಕ ಸಂಸ್ಥೆಗಳ ಸಹಕಾರ ಅತ್ಯಗತ್ಯ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದರು.

ಅವರು ಗುರುವಾರ ಭಟ್ಳಳ ಕರಿಕಲ್ಲಿನ  ಧ್ಯಾನ ಮಂದಿರದಲ್ಲಿ ನಡೆದ  ಧರ್ಮಸ್ಥಳ ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ  ಹಮ್ಮಿಕೊಂಡ ಶ್ರೀರಾಮ ಕಾರುಣ್ಯ ಕಲಾ ಸಂಘದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶ್ರೀಗಳ ಚಾತುರ್ಮಾಸ್ಯದಂತಹ ಪವಿತ್ರ ಕಾರ್ಯಕ್ರಮ ದಲ್ಲಿ ಸ್ವಾಮೀಜಿ ಅವರು ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನೀಡಿರುವುದು ಅಲ್ಲದೆ ಸಾಧಕ ಕಲಾವಿದರು ಗಳನ್ನು  ಸಪತ್ನೀಕರಾಗಿ  ಸನ್ಮಾನಿಸಿರುವುದು ಅತ್ಯಂತ ಪ್ರಶಂಸನೀಯ ಕಾರ್ಯ ಎಂದ ಅವರು  ಕಲಾವಿದನ ಕಲಾವೃತ್ತಿಯ ಯಶಸ್ಸಿನ ಹಿಂದೆ ಆತನ  ಧರ್ಮ ಪತ್ನಿಯ ಸಹಕಾರ, ತ್ಯಾಗವಿರುತ್ತದೆ. ಅವಳಿಗೂ ಪತಿಯೊಂದಿಗೆ ಗೌರವಿಸುವ ಪರಿಪಾಠ ಕಲಾ  ಸೇವೆಗೆ ಸಂದ ಗೌರವವಾಗಿದೆ ಎಂದರು.

ಯಕ್ಷಗಾನ ಕಲೆಯನ್ನು ಹಳ್ಳಿಹಳ್ಳಿಗೂ ಮುಟ್ಟಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಹವ್ಯಾಸಿ ಕಲಾವಿದರು, ವೃತ್ತಿ ಕಲಾವಿದರಿಗೆ  ಪ್ರೋತ್ಸಾಹ ನೀಡುವ ಅಗತ್ಯವಿದೆ.  ಯಕ್ಷಗಾನ ಕಲೆಗೆ ಕೇವಲ ಕಲಾವಿದರು, ಪ್ರೋತ್ಸಾಹಕರು ಇದ್ದರೆ ಸಾಲದು.  ಕಲೆಯನ್ನು ಆಸ್ವಾದಿಸುವ ಮನಸ್ಸುಗಳು ಅಗತ್ಯ.  ಸರಕಾರ, ಸಂಘ ಸಂಸ್ಥೆಗಳ ಪ್ರೋತ್ಸಾಹ ಸಿಕ್ಕಿದಾಗಲೇ ಯಕ್ಷಗಾನಕ್ಕೆ ಒಂದು ಭದ್ರ ನೆಲೆಯನ್ನು ಒದಗಿಸಿದಂತಾಗುತ್ತದೆ ಎಂದು ಡಾ.ತಲ್ಲೂರು ಅಭಿಪ್ರಾಯ ಪಟ್ಟರು.

ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಮಾತನಾಡಿ, ಬದುಕಿಗೆ ಆನಂದ, ಸುಖ ಬೇಕಾದರೆ ಧರ್ಮವನ್ನು ಪಾಲಿಸಬೇಕು. ಹಿಂದೆ ಋಷಿಮುನಿಗಳು ಓದಗಿಸಿದ ಧರ್ಮ ಆಚರಣೆಯ ಕೈಂಕರ್ಯವನ್ನು ಇಂದು ಯಕ್ಷಗಾನ ನೀಡುತ್ತಿದೆ. ಚಾತುರ್ಮಾಸ್ಯದ  50 ದಿನಗಳಲ್ಲಿ 50 ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸುವ ಚಿಂತನೆ ನಡೆಸಿದ್ದೇವೆ. ನಕರಾತ್ಮಕ ಚಿಂತನೆಯಿಂದ ಮನಸನ್ನು ಹೊರ ತರುವ, ಮನಸ್ಸನ್ನು ಜಾಗೃತಗೊಳಿಸುವ ಶಕ್ತಿ ಯಕ್ಷಗಾನಕ್ಕಿದೆ. ಮಾನವ ಶರೀರಕ್ಕೆ ಪ್ರಾಣ ಎಷ್ಟು ಮುಖ್ಯವೋ ಸಂಸ್ಕಾರವು ಅಷ್ಟೇ ಮುಖ್ಯ. ಮನಸ್ಸನ್ನು ವಿಕಾಸನಗೊಳಿಸಬೇಕು. ಮನಸ್ಸನ್ನು ಊರ್ದ್ವಮುಖವಾಗಿ ಪ್ರವಹಿಸಲು ಯಕ್ಷಗಾನ ಸಹಕಾರಿಯಾಗಿದೆ ಎಂದು ಶ್ರೀಗಳು ತಿಳಿಸಿದರು.

ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಯಕ್ಷಗಾನ ಅಕಾಡೆಮಿ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಅವರು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಖ್ಯಾತ ಯಕ್ಷಗಾನ ಸಂಘಟಕ  ಬಿ. ಜನಾರ್ಧನ ಅಮ್ಮುಂಜೆ ಹಾಗೂ ಪ್ರಸಿದ್ಧ ಯಕ್ಷಗಾನ ಕಲಾವಿದ ಪಂಜ ಗುಡ್ಡಪ್ಪ ಸುವರ್ಣ ಅವರನ್ನು ಸಪತ್ನೀಕರಾಗಿ  ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ  ಶ್ರೀರಾಮ ಕಾರುಣ್ಯ ಕಲಾ ಸಂಘದ ಸಂಚಾಲಕ  ಹಾಗೂ ಯಕ್ಷಗಾನ ಅಕಾಡೆಮಿ ಸದಸ್ಯ ದಯಾನಂದ ಪಿ ಬೆಳಾಲ್, ಕನ್ಯಾಡಿ ಸ್ವಾಮೀಜಿ ಅವರ ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ್ ಭಟ್ಕಳ,  ಉದ್ಯಮಿ ವಿಠಲ ನಾಯ್ಕ, ಶ್ರೀಗಳ ಶಿಷ್ಯ ಎಂ.ಎಸ್. ನಾಯ್ಕ್, ಪ್ರಸಿದ್ಧ ಭಾಗವಾತ  ಗಿರೀಶ್ ರೈ ಕಕ್ಕೆ ಪದವು ಮೊದಲಾದವರು ಉಪಸ್ಥಿತರಿದ್ದರು.

ದೇವುದಾಸ್ ಮಾಸ್ಟರ್ ಕಾರ್ಕಳ ಹಾಗೂ ರಮೇಶ್ ಕುಲಶೇಖರ ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಕುಲಶೇಖರ ಪರಿಚಯಿಸಿದರು. ಯಕ್ಷಗಾನ ಅಕಾಡೆಮಿ ಸದಸ್ಯ ದಯಾನಂದ ಪಿ ಬೆಳಲ್ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಂಘದ ಸದಸ್ಯರಿಂದ  ಬ್ರಹ್ಮಕಪಾಲ ಯಕ್ಷಗಾನ ಪ್ರದರ್ಶನ ನಡೆಯಿತು.

Leave a Reply

Your email address will not be published. Required fields are marked *

error: Content is protected !!