ಹಳಿ ದುರಸ್ತಿ ಕಾಮಗಾರಿ ಪೂರ್ಣ: ಮಂಗಳೂರು – ಬೆಂಗಳೂರು ರೈಲು ಸಂಚಾರ ಪುನರಾರಂಭ

ಮಂಗಳೂರು: ಭೂಕುಸಿತದಿಂದ ಹಾಳಾಗಿದ್ದ ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ವಿಭಾಗದ ಕಡಗರವಳ್ಳಿ ಹಾಗೂ ಯಡಕುಮಾರಿ ನಿಲ್ದಾಣಗಳ ನಡುವಿನ ಹಳಿಗಳ ದುರಸ್ತಿ ಕಾಮಗಾರಿ ಗುರುವಾರ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಭಾರೀ ಭೂಕುಸಿತದ ನಂತರ ಕರ್ನಾಟಕ ಕರಾವಳಿಯನ್ನು ಬೆಂಗಳೂರು ಮತ್ತು ಇತರ ಒಳನಾಡುಗಳೊಂದಿಗೆ ಸಂಪರ್ಕ ಕಲ್ಪಿಸುವ ಈ ವಿಭಾಗದಲ್ಲಿ ಜುಲೈ 27 ರಿಂದ ರೈಲುಗಳ ಕಾರ್ಯಾಚರಣೆ ಸ್ಥಗಿತಗೊಂಡಿತ್ತು.

ಇಂದು ಹಳಿಗಳ ಮರುಸ್ಥಾಪನೆ ಯಶಸ್ವಿಯಾಗಿ ಪೂರ್ಣಗೊಂಡ ನಂತರ, ಮೊದಲ ಪ್ಯಾಸೆಂಜರ್ ರೈಲು ಸಂಖ್ಯೆ 16575 ಯಶವಂತಪುರ – ಮಂಗಳೂರು ರೈಲು ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸದ್ಯಕ್ಕೆ ವೇಗದ ಮೀತಿಯನ್ನು ಗಂಟೆಗೆ 15 ಕಿ.ಮೀ ಗೆ ನಿರ್ಬಂಧ ಹೇರಲಾಗಿದೆ.

ಕಳೆದ 13 ದಿನಗಳಿಂದ ಬೆಂಗಳೂರು ಸೇರಿದಂತೆ ನಾನಾ ನಗರಗಳ ಜತೆಗೆ ಕರಾವಳಿ ರೈಲು ಸಂಪರ್ಕ ರದ್ದುಗೊಳಿಸಲಾಗಿತ್ತು ಆ.3 ಕ್ಕೆ ದುರಸ್ತಿ ಸಂಪೂರ್ಣವಾದ ಹಿನ್ನೆಲೆ ಭಾನುವಾರ ಹಾಗೂ ಸೋಮವಾರ ಖಾಲಿ ಗೂಡ್ಸ್‌ ರೈಲುಗಳ ಸಂಚಾರ ಮಾಡಲಾಗಿದ್ದು ಸಂಚಾರ ಯಶಸ್ವಿಯಾಗಿದೆ. ಮಂಗಳವಾರದಿಂದ ಎರಡು ದಿನಗಳ ಕಾಲ ಸರಕುಗಳನ್ನೊಳಗೊಂಡ ಗೂಡ್ಸ್‌ ರೈಲು ಸಂಚಾರ ಯಶಸ್ವಿಯಾದ ಬಳಿಕ ಇಂದಿನಿಂದ ಪ್ರಯಾಣಿಕ ರೈಲುಗಳಿಗೆ ಅವಕಾಶ ಮಾಡಿಕೊಡಲಾಗಿದೆ.

Leave a Reply

Your email address will not be published. Required fields are marked *

error: Content is protected !!