ಅಧಿಕಾರಿಗಳ ಗೊಂದಲದಿಂದ ಭೋವಿ ಜನಾಂಗಕ್ಕೆ ಅನ್ಯಾಯ: ಉದಯಕುಮಾರ್ ಭೋವಿ ಆರೋಪ

ಉಡುಪಿ: ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಭೋವಿ ಜನಾಂಗದಿಂದ ಧರಣಿ

ಉಡುಪಿ: ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಭೋವಿ ಸಮಾಜ ಸೇವಾ ಸಂಘದ ವತಿಯಿಂದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಇಂದು ಧರಣಿ ನಡೆಸಲಾಯಿತು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕರ್ನಾಟಕ ರಾಜ್ಯ ಮೂಲ ಭೋವಿ ಜನಾಂಗದವರು ಸರಕಾರದ ವಿರುದ್ಧ ದಿಕ್ಕಾರ ಕೂಗಿದರು. ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಯ 101 ಜಾತಿಗಳ ಪೈಕಿ ಕ್ರಮ ಸಂಖ್ಯೆ 23ರಲ್ಲಿ ಭೋವಿ ಜನಾಂಗದ ಬಗ್ಗೆ ಉಲ್ಲೇಖವಿದೆ. ಅದರಂತೆ 1977ರಿಂದ ನಾವು ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆಯುತ್ತಿದ್ದೇವೆ. ಆದರೆ, ಇತ್ತೀಚಿಗೆ ಕೆಲವು ವರ್ಷಗಳಿಂದ ನಮಗೆ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ಇದಕ್ಕೆ ಅಧಿಕಾರಿಗಳ ದ್ವಂದ್ವ ನಿಲುವೇ ಮುಖ್ಯ ಕಾರಣ ಎಂದು ಆರೋಪಿಸಿದರು.

ಕೆಲವೊಂದು ಅಧಿಕಾರಿಗಳು ಬೆಸ್ತರು ಹಾಗೂ ಗಂಗಮತಸ್ಥರಿಗೆ ನೀಡುವ ಪ್ರವರ್ಗ 1ರ ಪ್ರಮಾಣ ಪತ್ರವನ್ನು ನಮಗೆ ಒತ್ತಾಯಪೂರ್ವಕವಾಗಿ ನೀಡಲು ಪ್ರಯತ್ನ ಮಾಡುತ್ತಿದ್ದಾರೆ. ಸರಕಾರದಿಂದ ಹಲವಾರು ಆದೇಶಗಳು, ಸುತ್ತೋಲೆಗಳು ನಮ್ಮ ಪರವಾಗಿ ಬಂದರೂ ಕೂಡಾ ಅಧಿಕಾರಿಗಳು ಅದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ವಡ್ಡ ಜನಾಂಗದವರು ಭೋವಿಗಳಲ್ಲ. ಅವರು ಬೊಯಿ ಎಂಬ ಹೆಸರನ್ನಿಟ್ಟು ಈಗ ಭೋವಿ ಅಂತ ಮಾಡಿಕೊಂಡು ನಮಗೆ ಸಿಗುವ ಸವಲತ್ತುಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಭೋವಿ ಸಮಾಜ ಸೇವಾ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಉದಯಕುಮಾರ್ ಭೋವಿ ಮಾತನಾಡಿ, ಹಲವು ವರ್ಷಗಳಿಂದ ನಮ್ಮ ಜನಾಂಗಕ್ಕೆ ಅನ್ಯಾಯ ಆಗುತ್ತಿದೆ. ನಮ್ಮದು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಸಮಾಜ. ನಮಗೆ ಜಾತಿ ಪ್ರಮಾಣ ಪತ್ರ ನೀಡುವ ವಿಚಾರದಲ್ಲಿ ಅಧಿಕಾರಿಗಳು ಸಾಕಷ್ಟು ಗೊಂದಲಗಳ ನ್ನು ಸೃಷ್ಟಿ ಮಾಡಿದ್ದಾರೆ. ಕರ್ನಾಟಕ ರಾಜ್ಯದ ಮೂಲ ನಿವಾಸಿಯಾಗಿರುವ ಭೋವಿ ಜನಾಂಗಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ನೀಡಬೇಕೆಂಬ ಸ್ಪಷ್ಟ ಆದೇಶವಿದ್ದರೂ ಕೂಡ ಅಧಿಕಾರಿಗಳು ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ನಮ್ಮನ್ನು ಮೂಲ ಭೋವಿಗಳೆಂದು ಪರಿಗಣಿಸುತ್ತಿಲ್ಲ. ನಮಗೆ ಸಂವಿಧಾನ ಬದ್ಧವಾಗಿ ಬಂದಿರುವ ಹಕ್ಕನ್ನು ಕೇಳುತ್ತಿದ್ದೇವೆ. ಮೀಸಲಾತಿ ಪಟ್ಟಿಯಲ್ಲಿ ಇರುವಂತೆ ನಮ್ಮ ಜನಾಂಗಕ್ಕೆ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರತ್ನಾಕರ ಭೋವಿ, ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!