ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ: ಪ್ರಧಾನಿ ಮೋದಿ ಮೌನ ಸರಿಯಲ್ಲ- ಮುತಾಲಿಕ್
ಹುಬ್ಬಳ್ಳಿ: ಹಿಂಸಾಚಾರ ಪೀಡಿತ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಹಾಗೂ ಅವರ ಆಸ್ತಿ-ಪಾಸ್ತಿ, ಮಂದಿರಗಳ ಮೇಲಿನ ದಾಳಿ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಮೌನ ಪ್ರಶ್ನಿಸಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಬುಧವಾರ ಆಗ್ರಹಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೂಗಳ ಮೇಲಿನ ಹಲ್ಲೆ, ಭಾರತದ ಧ್ವಜಕ್ಕೆ ಅಗೌರವ ಮತ್ತು ರವೀಂದ್ರನಾಥ ಟ್ಯಾಗೋರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿರುವುದು ಅತ್ಯಂತ ಖಂಡನೀಯ ಎಂದು ಹೇಳಿದರು.
ಪ್ರತಿಭಟನಕಾರರು ಮೀಸಲಾತಿ ವಿಚಾರ ಹಿಡಿದು ಹಿಂದೂಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಇಂತಹ ಹಿಂಸಾಚಾರವು ಮೂಲಭೂತವಾದದ ಮುಖವನ್ನು ತೋರಿಸುತ್ತದೆ, ಇದನ್ನು ಬಲವಾಗಿ ನಿಂದಿಸಬೇಕಾಗಿದೆ ಎಂದು ತಿಳಿಸಿದರು.
ಬಾಂಗ್ಲಾದೇಶವು ಭಾರತದ ಸೌಜನ್ಯದಿಂದ ಹುಟ್ಟಿದ ದೇಶ, ಆ ದೇಶದ ಪ್ರಗತಿಯಲ್ಲಿ ಎಲ್ಲಾ ರೀತಿಯಲ್ಲಿಯೂ ಭಾರತ ಸಹಕರಿಸಿದೆ. ಆದರೆ, ಅಲ್ಲಿನ ಜನರು ಕೃತಜ್ಞರಾಗಿಲ್ಲ. ಹಿಂದೂಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ಬಾಂಗ್ಲಾ ದೇಶದ ಬಗ್ಗೆ ಯಾವುದೇ ರೀತಿಯ ಮೃದುತ್ವವನ್ನು ತೋರಿಸಬಾರದು. ಅಪರಾಧಿಗಳನ್ನು ಕಾನೂನು ಕ್ರಮಕ್ಕೆ ಒಳಪಡಿಸುವವರೆಗೆ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಬಾಂಗ್ಲಾದೇಶದ ಹಿಂಸಾಚಾರದಲ್ಲಿ ಪಾಕಿಸ್ತಾನ, ಚೀನಾ ಮತ್ತು ಅಮೆರಿಕದ ಪಾತ್ರವನ್ನು ತಳ್ಳಿಹಾಕಲು ಸಾಧ್ಯವಿಲ್ಲ. ವಿವಿಧ ಗಡಿಗಳಿಂದ ನುಸುಳಿರುವ ಹತ್ತು ಲಕ್ಷಕ್ಕೂ ಹೆಚ್ಚು ಬಾಂಗ್ಲಾದೇಶೀಯರು ಮತ್ತು ರೋಹಿಂಗ್ಯಾಗಳು ರಾಜ್ಯದಲ್ಲಿದ್ದು, ಭದ್ರತೆಗೆ ಬೆದರಿಕೆಯೊಡ್ಡಿದ್ದಾರೆ. ಹಾಗಾಗಿ ಈ ಅಕ್ರಮ ವಲಸಿಗರನ್ನು ಗುರುತಿಸಲು ಶಿವಸೇನೆ ಸಮೀಕ್ಷೆ ನಡೆಸಿ ಅವರನ್ನು ರಾಜ್ಯದಿಂದ ಹೊರಹಾಕಲು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ಹೇಳಿದರು.
ಸಮೀಕ್ಷೆ ನಡೆಸಲು ರಾಜ್ಯ ಮುಖಂಡ ಗಂಗಾಧರ ಕುಲಕರ್ಣಿ ನೇತೃತ್ವದಲ್ಲಿ ಐವರು ಸದಸ್ಯರನ್ನು ರಚಿಸಲಾಗಿದ್ದು, ವರದಿ ಸಲ್ಲಿಸಿದ ನಂತರ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಒಂದು ತಿಂಗಳ ಕಾಲಾವಕಾಶ ನೀಡಲಾಗುವುದು. ಒಂದು ವೇಳೆ ಸರ್ಕಾರ ಕಾರ್ಯನಿರ್ವಹಿಸುವಲ್ಲಿ ವಿಫಲವಾಗಿದ್ದೇ ಆದರೆ, ನಾವು ನಮ್ಮದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತೇ ವೆಂದು ಎಚ್ಚರಿಸಿದರು.
ಇದಕ್ಕೂ ಮುನ್ನ ಸೇನಾ ಸದಸ್ಯರು ಪೊಲೀಸ್ ಆಯುಕ್ತರು ಮತ್ತು ಜಿಲ್ಲಾ ಪೊಲೀಸ್ ಮುಖ್ಯಸ್ಥರನ್ನು ಆಗಸ್ಟ್ 12 ರಂದು ಭೇಟಿಯಾಗುವ ಮೂಲಕ ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಿದೆ ಎಂದು ಹೇಳಿದರು.