ಶಿರಾಡಿಘಾಟ್​​ನಲ್ಲಿ ಎಲ್ಲಾ ವಾಹನಗಳಿಗೂ ಸಂಚಾರಕ್ಕೆ ಅವಕಾಶ

ಸಕಲೇಶಪುರ: ಹಾಸನ-ಮಂಗಳೂರು ನಡುವಿನ ಶಿರಾಡಿಘಾಟ್‌ನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ದಿನದ 24 ಗಂಟೆಯೂ ಎಲ್ಲಾ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಸಕಲೇಶಪುರ ಉಪವಿಭಾಗಾಧಿಕಾರಿ ಡಾ.ಶ್ರುತಿ ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಕಳೆದ ಎರಡು-ಮೂರು ದಿನಗಳಿಂದ ಮಲೆನಾಡು ಭಾಗದಲ್ಲಿ ಮಳೆ ಗಣನೀಯವಾಗಿ ಕಡಿಮೆ ಯಾಗಿದೆ. ಹಾಗೆಯೇ ಭೂ ಕುಸಿತ ಪ್ರಮಾಣವೂ ತಗ್ಗಿದೆ. ಹಾಗಾಗಿ ಜಿಲ್ಲಾಧಿಕಾರಿ ಅವರ ಮಾರ್ಗದರ್ಶನದ ಮೇರೆಗೆ ದಿನದ 24 ಗಂಟೆಗೂ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ ಎಂದರು.

ದೊಡ್ಡತಪ್ಪಲು ಬಳಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದಿತ್ತು. ಅದನ್ನೂ ಸಂಪೂರ್ಣ ತೆರವು ಮಾಡಲಾಗಿದೆ. ಹಾಗೆಯೇ ರಸ್ತೆಯನ್ನೂ ಕೊಂಚ ಅಗಲೀಕರಣ ಮಾಡಲಾಗಿದೆ. ಹಾಗಾಗಿ ಎಲ್ಲಾ ವಾಹನಗಳೂ ಈ ಮೂಲಕವೇ ಸಂಚಾರ ಮಾಡಬಹುದು ಎಂದರು.

ಹೆಚ್ಚು ಕಳೆದ ಒಂದು ತಿಂಗಳಿಂದ ಮಲೆನಾಡು ಭಾಗದಲ್ಲಿ ಜೋರು ಮಳೆಯಾಗುತ್ತಿದ್ದ ಕಾರಣ, ದೊಡ್ಡತಪ್ಪಲು ಬಳಿ ಪದೇ ಪದೆ ಭೂ ಕುಸಿತ ಉಂಟಾಗಿ, ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು. ಹಲವು ವಾಹನಗಳ ಮೇಲೂ ಮಣ್ಣು ಕುಸಿದಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಗುಡ್ಡ ಕುಸಿತವಾಗಿದ್ದರಿಂದ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಇತ್ತೀಚೆಗೆ ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ಹಾಗಾಗಿ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ಆದರೂ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ತೆರವು ಕಾರ್ಯಾಚರಣೆ ತಂಡ ನಿಯೋಜನೆ ಮಾಡಿದ್ದೇವೆ. ಪೊಲೀಸ್ ಅಧಿಕಾರಿಗಳು, ಎನ್‌ಹೆಚ್‌ಎಐ ತಂಡ ದಿನದ 24 ಗಂಟೆಯೂ ಸ್ಥಳದಲ್ಲಿದ್ದು, ಮೇಲ್ವಿಚಾರಣೆ ವಹಿಸಲಿದೆ ಎಂದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

error: Content is protected !!