ಉಡುಪಿ: ಸಮಾನ ಮನಸ್ಕರ ತಂಡದಿಂದ 24ನೇ ಮನೆ ನಿರ್ಮಾಣ
ಉಡುಪಿ: ಸಮಾನ ಮನಸ್ಕರ ತಂಡದ ವತಿಯಿಂದ ಗೃಹ ನಿರ್ಮಾಣ ಯೋಜನೆಯಡಿ ಕುಂಜಿಬೆಟ್ಟು ಡಿಸಿಎಂ ಕಾಲೊನಿಯ ಬೇಬಿ ಸಾಲ್ಯಾನ್ ಅವರಿಗೆ ನಿರ್ಮಿಸಿದ 24ನೇ ಮನೆಯನ್ನು ಮಂಗಳವಾರ ಉದ್ಘಾಟಿಸಲಾಯಿತು.
ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ ದೀಪ ಬೆಳಗಿಸುವ ಮೂಲಕ ಮನೆಯನ್ನು ಉದ್ಘಾಟಿಸಿ ಮಾತನಾಡಿ, ಬಡವರಿಗೆ ಮನೆ ಒದಗಿಸುವ ಸರಕಾರದ ಕೆಲಸವನ್ನು ಸಮಾನ ಮನಸ್ಕರ ತಂಡ ಮಾಡುತ್ತಿರುವುದು ಶ್ಲಾಘನೀಯ. ಸಮಾಜದ ಬಡವರ ಕಣ್ಣೀರೊರೆಸುವ ಕೆಲಸವಾಗಬೇಕು. ತಂದೆ ಮತ್ತು ತಾಯಿ ಹೆಸರಲ್ಲಿ ತಾನು ಬಡವರಿಗೆ ಪ್ರತಿ ವರ್ಷ ಗೃಹ ನಿರ್ಮಾಣ ಮಾಡಿಕೊಡುವುದಾಗಿ ತಿಳಿಸಿದರು.
ಎಡಿಸಿ ಮಮತಾದೇವಿ ಬಿ. ಎಸ್. ಮಾತನಾಡಿ, ಸಮಾಜಕ್ಕೆ ಕೊಡುಗೆ ನೀಡುವ ಚಿಂತನೆಯನ್ನು ಪ್ರತಿಯೊಬ್ಬ ವ್ಯಕ್ತಿ, ಸಂಘ ಸಂಸ್ಥೆಗಳು ಮಾಡಬೇಕು. ಸಮಾಜದ ಜನರ ಕಷ್ಟ ನಷ್ಟಗಳಿಗೆ ಸ್ಪಂದನೆ, ಮೂಲಭೂತ ಸೌಲಭ್ಯ ಒದಗಿಸಲು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ ಅತ್ಯಗತ್ಯ ಎಂದು ಹೇಳಿದರು.
ಸಾಫಲ್ಯ ಟ್ರಸ್ಟಿನ ನಿರುಪಮಾ ಪ್ರಸಾದ್ ಶೆಟ್ಟಿ, ಶ್ರೀನಿವಾಸ ರಾವ್, ಚಿನ್ನಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ರವಿಚಂದ್ರ ಮಾರಾಳಿ, ಮಾಜಿ ಅಧ್ಯಕ್ಷ ಕಿಶೋರ್ ಆಚಾರ್ಯ ಉಪಸ್ಥಿತರಿದ್ದರು. ವೆಂಕಟೇಶ್ ಆಚಾರ್ಯ ಸ್ವಾಗತಿಸಿದರು. ಶಶಿಧರ ಪುರೋಹಿತ್ ಪ್ರಾಸ್ತಾವಿಕ ಮಾತನಾಡಿದರು. ಪ್ರತಿಮಾ ಜಯಪ್ರಕಾಶ್ ಆಚಾರ್ಯ ನಿರೂಪಿಸಿದರು.