ಯಕ್ಷಮಿತ್ರರು ದುಬೈ: “ಯಕ್ಷ ಸಂಭ್ರಮ-2024” ಆಮಂತ್ರಣ ಪತ್ರಿಕೆ ಬಿಡುಗಡೆ
ದುಬೈಯ ಯಕ್ಷಗಾನದ ಮಾತೃಸಂಸ್ಥೆಯಾದ ಯಕ್ಷ ಮಿತ್ರರು ದುಬೈಯ “ಯಕ್ಷ ಸಂಭ್ರಮ – 2024” ಕಾರ್ಯಕ್ರಮದ ಅಂಗವಾಗಿ ಸೆ.15ರ ಆದಿತ್ಯವಾರದಂದು ಎಮಿರೆಟ್ಸ್ ಥಿಯೇಟರ್ ಜುಮೇರದಲ್ಲಿ ಪ್ರದರ್ಶನಗೊಳ್ಳಲಿರುವ 21ನೇ ವರ್ಷದ ಬಪ್ಪನಾಡು ಕ್ಷೇತ್ರ ಮಾಹಾತ್ಮೆ ಪ್ರಸಂಗದ ಆಮಂತ್ರಣ ಪತ್ರಿಕೆ ಮತ್ತು ಟಿಕೆಟ್ ಬಿಡುಗಡೆ ಸಮಾರಂಭವು ದುಬೈಯ ಪ್ರತಿಷ್ಟಿತ ಹೋಟೆಲ್ ನ ಸಭಾಂಗಣದಲ್ಲಿ ಆದಿತ್ಯವಾರದಂದು ಅದ್ದೂರಿಯಾಗಿ ನಡೆಯಿತು.
ಯಕ್ಷಮಿತ್ರರು ಸಂಸ್ಥೆಯ ಬಾಲಕಲಾವಿದರ ಗಣಪತಿ ದೇವರ ಸ್ತುತಿಯೊಂದಿಗೆ ಪ್ರಾರಂಭವಾದ ಸಭಾಕಾರ್ಯಕ್ರಮದಲ್ಲಿ ವಾಸುದೇವ ಭಟ್ ಪುತ್ತಿಗೆ, ಉದ್ಯಮಿಗಳಾದ ಹರೀಶ್ ಶೇರಿಗಾರ್, ಹರೀಶ್ ಬಂಗೇರ, ದಿವಾಕರ ಶೆಟ್ಟಿ, ಪದ್ಮರಾಜ್ ಎಕ್ಕಾರ್, ಜೇಮ್ಸ್ ಮೆಂಡೋನ್ಸ, ಸತೀಶ್ ಪೂಜಾರಿ, ಶಶಿರಾಜ್ ನಾಗರಾಜಪ್ಪ, ನೋವೆಲ್ ಅಲ್ಮೆಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಆಮಂತ್ರಣ ಪತ್ರಿಕೆ ಮತ್ತು ಟಿಕೆಟ್ ಬಿಡುಗಡೆಗೊಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ದುಬೈಯ ಹಲವು ಸಂಘಟನೆಗಳ ಮುಖಂಡರು , ಯಕ್ಷ ಕಲಾಭಿಮಾನಿಗಳು, ಕಲಾಪೋಷಕರು ಹಾಗೂ ಸಂಸ್ಥೆಯ ಹಿರಿಯ ಸದಸ್ಯರುಗಳಾದ ಚಿದಾನಂದ ಪೂಜಾರಿ, ದಯಾ ಕಿರೋಡಿಯನ್, ಜಯಂತ್ ಶೆಟ್ಟಿ, ಅಶೋಕ್ ತೊನ್ಸೆ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ಧು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಊರಿನ ಪ್ರಸಿದ್ಧ ಭಾಗವತರಾದ ಗಣೇಶ್ ಭಟ್ ಹೊಸಮೂಲೆ, ಚೆಂಡೆ ಮದ್ದಳೆಯಲ್ಲಿ ದೇಲಂತಮಜಲು ಸುಭ್ರಮಣ್ಯ ಭಟ್, ಲೋಕೇಶ್ ಕಟೀಲು ಹಾಗೂ ಮುಮ್ಮೇಳದಲ್ಲಿ ರಾಧಾಕೃಷ್ಣ ನಾವಡ ಮಧೂರು, ಮಹೇಶ್ ಕುಮಾರ್ ಸಾಣೂರು, ಶಿವರಾಜ್ ಬಜಕೂಡ್ಲು, ಭುವನ್ ಶೆಟ್ಟಿ ಬೋಳಾರ ವೇಷಭೂಷಣದಲ್ಲಿ ಜಯಂತ್ ಪೈವಳಿಕೆ ಮತ್ತು ಯಕ್ಷಮಿತ್ರರು ದುಬೈಯ ಕಲಾವಿದರ ಕೂಡುವಿಕೆಯೊಂದಿಗೆ, ಯಕ್ಷಗುರುಗಳಾದ ಕಿಶೋರ್ ಗಟ್ಟಿ ಇವರ ದಕ್ಷ ನಿರ್ದೇಶನದಲ್ಲಿ ಬಪ್ಪನಾಡು ಕ್ಷೇತ್ರ ಮಹಾತ್ಮೇ ಪ್ರಸಂಗವು ಸಂಪನ್ನ ಗೊಳ್ಳಲಿದೆಯೆಂದು ತಿಳಿಸಲಾಯಿತು. ಸಂಸ್ಥೆಯ ಸದಸ್ಯರಾದ ರಿತೇಶ್ ಅಂಚನ್ ಕುಲಶೇಖರ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದ ಸಮರ್ಪಣೆಯನ್ನು ಮಾಡಿದರು.