ಹೋಂ ಕ್ವಾರಂಟೈನ್ ಉಲ್ಲಂಘನೆ: ನಾಲ್ವರ ವಿರುದ್ಧ ಪ್ರಕರಣ ದಾಖಲು
ಯಾದಗಿರಿ: ಹೊರ ರಾಜ್ಯದಿಂದ ಆಗಮಿಸಿದ ವಲಸೆಗಾರರಿಗೆ ಹೋಂ ಕ್ವಾರಂಟೈನ್ನಲ್ಲಿ ಇರುವಂತೆ ಸೂಚನೆ ನೀಡಿದರೂ ಸರ್ಕಾರದ ಆದೇಶವನ್ನು ಪಾಲಿಸದೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ಹರಡಿಸುವ ದುರುದ್ದೇಶದಿಂದ ತಾಂಡಾದಲ್ಲಿ ತಿರುಗಾಡುತ್ತಿದ್ದ ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಬೀರನಕಲ್ ತಾಂಡಾ ಮತ್ತು ಕಮಲನಾಯಕ ತಾಂಡಾದ 4 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್, ಹೊರ ರಾಜ್ಯದಿಂದ ಆಗಮಿಸಿದ ವಲಸೆಗಾರರನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇರಿಸಲಾಗುತ್ತಿದೆ. ಸಾಂಸ್ಥಿಕ ಕ್ವಾರಂಟೈನ್ನಲ್ಲಿ ನಿಗದಿತ ಅವಧಿ ಮುಕ್ತಾಯಗೊಂಡ ನಂತರ ಹೋಂ ಕ್ವಾರಂಟೈನ್ ಅವಲೋಕನೆಗಾಗಿ ಕೇಂದ್ರ, ರಾಜ್ಯ ಸರ್ಕಾರದ ಮಾರ್ಗಸೂಚಿ ಹಾಗೂ ಶಿಷ್ಟಾಚಾರದಂತೆ ಹೋಂ ಕ್ವಾರಂಟೈನ್ಗಾಗಿ ಕಳುಹಿಸಲಾಗುತ್ತಿದೆ. ಆದರೆ, ವಡಗೇರಾ ತಾಲ್ಲೂಕಿನ ಬೀರನಕಲ್ ತಾಂಡಾ ಮತ್ತು ಕಮಲನಾಯಕ ತಾಂಡಾದ 4 ಜನರು ಹೋಂ ಕ್ವಾರಂಟೈನ್ ಉಲ್ಲಂಘಿಸಿದ್ದಾರೆ ಎಂದರು.
ಆರೋಪಿಗಳ ಮೇಲೆ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಹಂತದಲ್ಲಿದೆ. ಇವರನ್ನು ಪುನಃ ಸಾಂಸ್ಥಿಕ ದಿಗ್ಬಂಧನದಲ್ಲಿ ಅವಲೋಕನೆಗಾಗಿ ಇರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಹೋಂ ಕ್ವಾರಂಟೈನ್ ಅವಲೋಕನೆಗಾಗಿ ಇರುವ ಜನರು, ತಮ್ಮ ಅವಲೋಕನಾ ಅವಧಿ ಮುಗಿಯುವವರೆಗೆ ಕಡ್ಡಾಯವಾಗಿ ಹೋಂ ಕ್ವಾರಂಟೈನ್ನಲ್ಲಿ ಇರಬೇಕು. ಒಂದು ವೇಳೆ ಹೋಂ ಕ್ವಾರಂಟೈನ್ ಬಿಟ್ಟು ಹೊರಗಡೆ ತಿರುಗಾಡಿದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಹಾಗೂ ಅಂತವರನ್ನು ಮತ್ತೆ ಸಾಂಸ್ಥಿಕ ದಿಗ್ಬಂಧನದಲ್ಲಿ ಅವಲೋಕನೆಗಾಗಿ ಇರಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಜಿಲ್ಲಾಡಳಿತವು ಎಲ್ಲಾ ರೀತಿಯ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಕೋವಿಡ್-19 ಮುಕ್ತ ಜಿಲ್ಲೆಯನ್ನಾಗಿಸುವ ಪ್ರಯತ್ನದಲ್ಲಿ ಸಾರ್ವಜನಿಕರು ಸಹಕರಿಸಬೇಕಾಗಿ ಎಂದು ಅವರು ಕೋರಿದ್ದಾರೆ.