ಯಕ್ಷಗಾನ ಹೆಜ್ಜೆ ತರಬೇತಿ ಉದ್ಘಾಟನೆ: ಯಕ್ಷಗಾನ ಕಲೆಯಿಂದ ಸಂಸ್ಕೃತಿ ಬೆಳೆಯುತ್ತದೆ- ಡಾ.ತಲ್ಲೂರು
ಸಿದ್ದಾಪುರ, ಆ.5: ಯಕ್ಷಗಾನ ಕಲೆ ಅದ್ಭುತವಾದ ಕಲೆ. ಯಕ್ಷಗಾನ ಕಲೆಯಿಂದ ಜ್ಞಾನ, ಆರೋಗ್ಯ, ಆಯುಷ್ಯ, ಸಂಸ್ಕಾರ, ಸಂಸ್ಕೃತಿ ಬೆಳೆಯುತ್ತದೆ. ಪುರಾಣಗಳ ಪ್ರಸಂಗದಿಂದ ಮನಸ್ಸು ವಿಕಾಸವಾಗುತ್ತದೆ. ಯಕ್ಷಗಾನ ಕಲೆ ಕಲಿತ ಮಕ್ಕಳಲ್ಲಿ ಜ್ಞಾನವೃದ್ಧಿಯಾಗುವುದರೊಂದಿ ಗೆ ವಿದ್ಯಾಭ್ಯಾಸವು ವೃದ್ಧಿಯಾಗುತ್ತದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ವಿಶ್ವ ಕುಂದಾಪುರ ಕನ್ನಡ ದಿನಾಚರಣೆಯ ಅಂಗವಾಗಿ ರವಿವಾರ ಸಿದ್ದಾಪುರ ಶ್ರೀ ರಂಗನಾಥ ಸಭಾಭವನದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರ ಸಹಯೋಗದೊಂದಿಗೆ ಯಕ್ಷ ನುಡಿಸಿರಿ ಬಳಗ ಸಿದ್ದಾಪುರ ಇವರ 3ನೇ ವರ್ಷದ ಶಾಲಾ ಮಕ್ಕಳ ಯಕ್ಷಗಾನ ಹೆಜ್ಜೆ ತರಬೇತಿ ತರಗತಿ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ಮಾತನಾಡಿದರು.
ಶ್ರೀಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತಸರ ಎಸ್. ಸಚ್ಚಿದಾನಂದ ಚಾತ್ರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿ ಕುಂದಾಪುರ ಆದರ್ಶ ಆಸ್ಪತ್ರೆಯ ಆಡಳಿತಾಧಿಕಾರಿ ಡಾ।ಆದರ್ಶ ಹೆಬ್ಬಾರ್ ಮಾತನಾಡಿದರು. ಅತಿಥಿಗಳಾಗಿ ಸಿದ್ದಾಪುರ ಗ್ರಾ.ಪಂ. ಉಪಾಧ್ಯಕ್ಷ ಕೃಷ್ಣ ಪೂಜಾರಿ, ಯಕ್ಷಗುರು ಮಂಜುನಾಥ ಕುಲಾಲ ಐರೋಡಿ, ಶ್ರೀರಂಗನಾಥ ಸಭಾಭವನದ ಮಾಲಕ ಮಧುಸೂದನ ಕಾಮತ್ ಉಪಸ್ಥಿತರಿದ್ದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ಯಕ್ಷ ನುಡಿಸಿರಿ ಸಿದ್ದಾಪುರ ಬಳಗದ ಅಧ್ಯಕ್ಷ ಡಾ.ಜಗದೀಶ ಶೆಟ್ಟಿ ಆವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ಪ್ರೋತ್ಸಾಹಕರಾದ ಮಧುಸೂದನ್ ಕಾಮತ್ ಪುತ್ರ ಸಿ.ಎ. ಪದವಿಯಲ್ಲಿ ಉತ್ತೀರ್ಣರಾದ ಡಿ. ಅಭಿಷೇಕ್ ಕಾಮತ್ ಅವರನ್ನು ಸನ್ಮಾನಿಸಲಾಯಿತು. ಕುಂದಾಪ್ರ ಕನ್ನಡದಲ್ಲಿ ಹೊಯ್ ಕೈ ಯಕ್ಷಗಾನ ತಾಳಮದ್ದಲೆ ಜರಗಿತು.
ನಿವೃತ್ತ ಉಪನ್ಯಾಸಕ ಶ್ರೀಕಾಂತ್ ರಾವ್ ಸಿದ್ದಾಪುರ ಸ್ವಾಗತಿಸಿದರು. ಯಕ್ಷ ನುಡಿಸಿರಿ ಬಳಗದ ಅಧ್ಯಕ್ಷ ಡಾ. ಜಗದೀಶ ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು. ಮುಸ್ತಕ ಹೆನ್ನಾಬೈಲು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕೆ. ಭೋಜ ಶೆಟ್ಟಿ ವಂದಿಸಿದರು.