ಪಾದಯಾತ್ರೆಗೆ ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯುವ ಶಕ್ತಿ ಇದೆ: ಬಿ.ವೈ.ವಿಜಯೇಂದ್ರ
ಬೆಂಗಳೂರು: ಮೈಸೂರು ಚಲೋ ಪಾದಯಾತ್ರೆಯು ಕರ್ನಾಟಕದ ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯುವ ಶಕ್ತಿಯನ್ನು ಹೊಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಹೇಳಿದರು.
ಕೆಂಗೇರಿಯಲ್ಲಿ ಇಂದು ಬಿಜೆಪಿ- ಜೆಡಿಎಸ್ ಸಮನ್ವಯ ದಲ್ಲಿ ಮೈಸೂರು ಚಲೋ ಪಾದಯಾತ್ರೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು,”ಸುಳ್ಳು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರವು ವಚನಭ್ರಷ್ಟವಾಗಿದೆ. ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಅಹಿಂದ ವರ್ಗದವರಿಗೆ ಸಾಮಾಜಿಕ ನ್ಯಾಯ ಕೊಡುವುದಾಗಿ ಹೇಳಿದ್ದ ಸಿದ್ದರಾಮಯ್ಯನವರ ಸರಕಾರವು ಪರಿಶಿಷ್ಟ ಸಮುದಾಯದ ವಾಲ್ಮೀಕಿ ನಿಗಮದ 187 ಕೋಟಿ ಹಣವನ್ನು ಲೂಟಿ ಮಾಡಿದೆ” ಎಂದು ಟೀಕಿಸಿದರು.
ಮೈಸೂರಿನ ಮುಡಾದ ಅವ್ಯವಹಾರದಡಿ ಬಡವರಿಗೆ ನಿವೇಶನಗಳನ್ನು ವಂಚಿಸಿದ್ದಾರೆ. 5 ಸಾವಿರ ಕೋಟಿಯ ಹಗರಣ ಅಲ್ಲಿ ನಡೆದಿದೆ. ಭ್ರಷ್ಟ ಅಧಿಕಾರಿಗಳಿಗೆ ಸ್ವತಃ ಮುಖ್ಯಮಂತ್ರಿಗಳೇ ಬೆಂಬಲ, ರಕ್ಷಣೆ ಕೊಡುತ್ತಿದ್ದಾರೆ. ಭ್ರಷ್ಟಾಚಾರ ತಮ್ಮ ಬುಡಕ್ಕೆ ಬರುವ ಆತಂಕದಿಂದ ಮುಖ್ಯಮಂತ್ರಿಗಳೇ ಅಧಿಕಾರಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಗಾಂಧಿ ಕುಟುಂಬಕ್ಕೆ ಕಪ್ಪ ಕಾಣಿಕೆ ನೀಡಲು ಎಟಿಎಂ ಸರಕಾರ ಬರುತ್ತಿದೆ ಎಂದು ಚುನಾವಣೆ ವೇಳೆ ಹೇಳಿದ್ದೆವು. ಮುಡಾ ಹಗರಣ ನಡೆದುದಾಗಿ ಸಿದ್ದರಾಮಯ್ಯನವರೇ ನೇಮಿಸಿದ ಮುಡಾ ಅಧ್ಯಕ್ಷ ಮರಿಗೌಡರೇ ಹೇಳಿದ್ದಾರೆ. ಪರಿ಼ಶಿಷ್ಟ ಸಮುದಾಯಕ್ಕೆ ನಿರಂತರ ಅನ್ಯಾಯ ಮಾಡಿದ್ದಾರೆ. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರು ಕಾಂಗ್ರೆಸ್ ಪಕ್ಷ. ಅಂಥ ಕಾಂಗ್ರೆಸ್ ಸರಕಾರವನ್ನು ಬುಡಸಮೇತ ಕಿತ್ತು ಹಾಕಲಿದ್ದೇವೆ ಎಂದು ವಿಜಯೇಂದ್ರ ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಭ್ರಷ್ಟಾಚಾರದಲ್ಲಿ ಸಿಲುಕಿದ ಸಿದ್ದರಾಮಯ್ಯನವರು ಗೌರವಯುತವಾಗಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಿರ್ಗಮಿಸಲಿ. ಈ ಪಾದಯಾತ್ರೆ ಮಧ್ಯದಲ್ಲೇ ಸಿದ್ದರಾಮಯ್ಯನವರು ರಾಜೀನಾಮೆ ಕೊಡಲಿದ್ದಾರೆ ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷದ ಪಾಪದ ಕೊಡ ತುಂಬಿದೆ. ಇನ್ನು 10 ವರ್ಷ ಬಿಡಿ, 10 ತಿಂಗಳು ಕೂಡ ಅವರು ಆಡಳಿತ ನಡೆಸಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ಸರಕಾರವು ಆಡಳಿತದಲ್ಲಿ ಹಿಂದೆಂದೂ ಕಾಣದ ಭ್ರಷ್ಟಾಚಾರದಲ್ಲಿ ತೊಡಗಿದೆ. ಈ ಸರಕಾರ, ಸಿದ್ದರಾಮಯ್ಯನವರನ್ನು ಕಿತ್ತೊಗೆಯಲು ಈ ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಮಾಜಿ ಡಿಸಿಎಂಗಳಾದ ಗೋವಿಂದ ಕಾರಜೋಳ, ಡಾ.ಅಶ್ವತ್ಥನಾರಾಯಣ್, ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್‌ನ ನಾಯಕ ಸುರೇಶ್, ಮಾಜಿ ಸಚಿವರು, ಬಿಜೆಪಿ- ಜೆಡಿಎಸ್ ಸಂಸದರು, ಎರಡೂ ಪಕ್ಷಗಳ ಶಾಸಕರು, ಮುಖಂಡರು, ಮಾಜಿ ಸಂಸದರು, ಮಾಜಿ ಶಾಸಕರು ಭಾಗವಹಿಸಿದ್ದರು.