ಸಹಕಾರಿ ಸಂಘಕ್ಕೆ 23.62 ಲಕ್ಷ ರೂ. ವಂಚನೆ- ಸಿಇಒ ವಿರುದ್ಧ ಪ್ರಕರಣ ದಾಖಲು
ಕುಂದಾಪುರ: ತಲ್ಲೂರಿನ ಸಪ್ತಸ್ವರ ವಿವಿದೋದ್ದೇಶ ಸಹಕಾರ ಸಂಘ ದಲ್ಲಿ 2019ರಿಂದ 2022ರವರೆಗೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುವ ರವಿ ಎಂಬವರು ತನ್ನ ಕರ್ತವ್ಯದ ಅವಧಿಯಲ್ಲಿ ಸಂಘದ ಸದಸ್ಯರ ಬೇರೆ ಬೇರೆ ಖಾತೆಗಳಿಂದ ಸಂಘದ ಸ್ವರಸಿಂಚನ ಖಾತೆಗೆ ಬಂದ ಹಣ 6,37,428 ರೂ.ವನ್ನು ಸಂಘದ ಖಾತೆ ಜಮಾ ಮಾಡದೇ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಸದ್ಯ ಸಂಸ್ಥೆಯಲ್ಲಿ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತಿರುವ ವಿಶಾಲ (32) ಅವರು ಕುಂದಾಪುರ ಠಾಣೆಯಲ್ಲಿ ರವಿ ವಿರುದ್ಧ ವಂಚನೆ ಯ ದೂರು ದಾಖಲಿಸಿದ್ದಾರೆ.
ಅಲ್ಲದೇ ರವಿ ಅವರು ಹಲವಾರು ರೀತಿಯಲ್ಲಿ ಸಂಸ್ಥೆಗೆ ಮೋಸ ಮತ್ತು ವಂಚನೆ ಮಾಡುವ ಉದ್ದೇಶದಿಂದ ಸಂಘದ ದಾಖಲೆಗಳನ್ನು ಅನಧಿಕೃತವಾಗಿ ತಿದ್ದಿ ತನ್ನ ಲಾಭಕ್ಕಾಗಿ ಒಟ್ಟು 23,62,793.99 ರೂ. ಹಣವನ್ನು ದುರುಪಯೋಗಪಡಿಸಿಕೊಂಡು ಸಂಘಕ್ಕೆ ಮೋಸ ಮಾಡಿದ್ದಾರೆ ಎಂದು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.