ಎದೆನೋವು ಕಾಣಿಸಿಕೊಂಡ ಯುವತಿಯ ಜೀವ ಉಳಿಸಿದ ಬಸ್ ಚಾಲಕ, ನಿರ್ವಾಹಕ!
ಮಂಗಳೂರು: ನಗರದ ಬಸ್ ವೊಂದರ ಚಾಲಕ ಹಾಗೂ ಕಂಡಕ್ಟರ್ ಬುಧವಾರ ಮಾನವೀಯತೆ ಮೆರೆದಿದ್ದು, ಯುವತಿ ಜೀವ ಉಳಿಸಿದ್ದಾರೆ. ಎದೆನೋವು ಕಾಣಿಸಿಕೊಂಡ ವಿದ್ಯಾರ್ಥಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸುವ ಮೂಲಕ ಆಕೆಯ ಅಮೂಲ್ಯ ಪ್ರಾಣವನ್ನು ಕಾಪಾಡಿದ್ದಾರೆ.
ಅಂದಹಾಗೆ ನಗರದಲ್ಲಿ ನಿತ್ಯ ಸಂಚರಿಸುವ 13F ಬಸ್ ಕೂಳೂರು ಮೂಲಕ ಸಾಗುವಾಗ ಬಸ್ ನಲ್ಲಿದ್ದ ವಯಸ್ಕ ಯುವತಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಬಸ್ ಚಾಲಕ ಮಹೇಶ್ ಪೂಜಾರಿ ಮತ್ತು ಸುರೇಶ್ ಕಂಕನಾಡಿ ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಬಸ್ ನ ಹಾರ್ನ್ ಅನ್ನು ಸೈರಲ್ ಆಗಿ ಬಳಸಿ, ಕೇವಲ ಆರು ನಿಮಿಷಗಳಲ್ಲಿ ಆರು ಕಿಲೋಮೀಟರ್ ದೂರದಲ್ಲಿದ್ದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಚಾಲಕ ಬಸ್ ನನ್ನು ಆಸ್ಪತ್ರೆ ಒಳಗೆ ಚಲಾಯಿಸಿಕೊಂಡು ಹೋಗಿದ್ದು, ಕಂಡಕ್ಟರ್ ತ್ವರಿತ ಚಿಕಿತ್ಸೆಗಾಗಿ ಅರೆವೈದ್ಯಕೀಯ ಸಿಬ್ಬಂದಿಯತ್ತ ದೌಡಾಯಿಸಿದ್ದಾರೆ.
ಬಸ್ ಚಾಲಕ ಹಾಗೂ ಕಂಡಕ್ಟರ್ ಅವರ ಸಮಯ ಪ್ರಜ್ಞೆಗೆ ಧನ್ಯವಾದ ಹೇಳಲೇಬೇಕು. ಯುವತಿಗೆ ತಕ್ಷಣ ಚಿಕಿತ್ಸೆ ನೀಡಲಾಗಿದ್ದು, ಆಕೆ ಅಪಾಯದಿಂದ ಪಾರಾಗಿದ್ದಾಳೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ವೈಯಕ್ತಿಕ ಕಾರಣಗಳಿಗಾಗಿ ಪ್ರಯಾಣಿಕರ ಗುರುತನ್ನು ತಡೆಹಿಡಿಯಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುವತಿ ಸಂಬಂಧಿಕರು ಚಾಲಕ ಮತ್ತು ಕಂಡಕ್ಟರ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಜೋಡಿಯ ತ್ವರಿತ ಆಲೋಚನೆ ಮಂಗಳೂರಿನಾದ್ಯಂತ ಚರ್ಚೆಯಾಗುತ್ತಿದೆ. ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಧನ್ಯವಾದಗಳ ಸುರಿಮಳೆಯಾಗುತ್ತಿದೆ.