ಮಂಗಳೂರು: ಕೋವಿಡ್-19 ಪರೀಕ್ಷಾ ವರದಿ ನಕಲಿ – 6 ಕಾರ್ಮಿಕರಿಗೆ ದುಬೈ ವಿಮಾನ ಹತ್ತಲು ಅನುಮತಿ ನಿರಾಕರಣೆ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನ.1ರಂದು ದುಬೈಗೆ ತೆರಳಬೇಕಿದ್ದ 6 ಮಂದಿಗೆ ವಿಮಾನ ಪ್ರಯಾಣ ಸಾಧ್ಯವಾಗಿಲ್ಲ. ವಿಮಾನ ನಿಲ್ದಾಣ ಅಧಿಕಾರಿಗಳು 6 ಮಂದಿ ಪ್ರಯಾಣಿಕರ ಕೋವಿಡ್-19 ವರದಿಯ ನಿಖರತೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದೇ ಇದಕ್ಕೆ ಕಾರಣವಾಗಿದೆ.

ದುಬೈಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ 6 ಮಂದಿ ಹಿಂತಿರುಗಲು ನೋಡುತ್ತಿದ್ದಾಗ ಅವರಿಗೆ ಪ್ರಯಾಣಿಸಲು ಅವಕಾಶ ನೀಡದಿದ್ದುದರಿಂದ ಭಟ್ಕಳದಲ್ಲಿಯೇ ನಿಲ್ಲಬೇಕಾದ ಪರಿಸ್ಥಿತಿ ಬಂತು ಎಂದು ಇಸ್ಮಾಯಿಲ್ ತಿಳಿಸಿದ್ದಾರೆ.

ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆ ನೀಡಿರುವ ಕೋವಿಡ್-19 ಪರೀಕ್ಷಾ ವರದಿ ನಕಲಿಯಾಗಿದೆ ಎಂದು ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಹೇಳಿ ವಿಮಾನ ಹತ್ತಲು ಅವಕಾಶ ನೀಡದಿದ್ದಾಗ ಈ ಕಾರ್ಮಿಕರಿಗೆ ಆಘಾತವಾಯಿತು. ವಿಮಾನ ನಿಲ್ದಾಣದಲ್ಲಿ ಬಳಸುವ ಕೋವಿಡ್ ವಾರ್ ಆಪ್ ನಲ್ಲಿ ಇವರ ಕೋವಿಡ್ ಪರೀಕ್ಷೆ ಪ್ರಕ್ರಿಯೆಯಲ್ಲಿದೆ ಎಂದು ತೋರಿಸುತ್ತಿದ್ದುದೇ ಕಾರಣವಾಗಿದೆ.

ತಮ್ಮ ಕೋವಿಡ್ ಪರೀಕ್ಷಾ ವರದಿ ನಕಲಿಯಲ್ಲ, ಅಸಲಿ ಎಂದು ಕಾರ್ಮಿಕರು ಎಷ್ಟೇ ಹೇಳಿದರೂ ಕೂಡ ಅಧಿಕಾರಿಗಳು ಕೇಳುವ ಪರಿಸ್ಥಿತಿಯಲ್ಲಿರಲಿಲ್ಲ. ಕೊನೆಗೆ ಕಾರವಾರದ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಕೇಳಿಕೊಂಡರು. ಕೊನೆಗೆ ಸರ್ಕಾರಿ ಅಧಿಕಾರಿಯೊಬ್ಬರು ವಿಮಾನ ನಿಲ್ದಾಣ ಅಧಿಕಾರಿಗಳ ಜೊತೆ ಮಾತನಾಡಿದರು, ಆದರೆ ಅವರ ಮಾತುಗಳನ್ನು ಸಹ ಕೇಳಲಿಲ್ಲ. ಕೊನೆಗೆ ವಿಮಾನ ಹಾರಿ ಹೋಯಿತು.

ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಯಿತು, ಟಿಕೆಟ್ ಗೆ ನಾವು 9 ಸಾವಿರ ರೂಪಾಯಿ ಖರ್ಚು ಮಾಡಿದ್ದೇವೆ. ಕಳೆದ 6 ತಿಂಗಳಿನಿಂದ ಕೆಲಸ ಕೂಡ ಇಲ್ಲ. ಸಾಲ ಮಾಡಿ ದುಬೈಗೆ ಹೋಗಲು ವಿಮಾನ ಟಿಕೆಟ್ ಗಾಗಿ ಹಣ ಪಡೆದಿದ್ದೆವು ಎನ್ನುತ್ತಾರೆ ಇಸ್ಮಾಯಿಲ್ ನಗರ್.

ಐಸಿಎಂಆರ್ ಪೋರ್ಟಲ್ ನಲ್ಲಿ ಕಾನೂನುಬದ್ಧವಾಗಿ ಕೋವಿಡ್ ಟೆಸ್ಟ್ ಫಲಿತಾಂಶವಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ ಹರೀಶ್ ಕುಮಾರ್ ಹೇಳುತ್ತಿದ್ದರೆ, ಕೋವಿಡ್ ವಾರ್ ಆಪ್ ನಲ್ಲಿ ತೋರಿಸಬೇಕು ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಹೇಳುತ್ತಾರೆ. ವಿಮಾನ ನಿಲ್ದಾಣ ಅಧಿಕಾರಿಗಳು ಸ್ಪೆಸಿಮೆನ್ ರೆಫರ್ರಲ್ ಫಾರ್ಮ್ ನಂಬರ್ ಬಳಸಿಕೊಂಡು ಕೋವಿಡ್ ಟೆಸ್ಟ್ ಫಲಿತಾಂಶ ನೋಡಬಹುದಾಗಿತ್ತು ಎನ್ನುತ್ತಾರೆ ಜಿಲ್ಲಾಧಿಕಾರಿ.

Leave a Reply

Your email address will not be published. Required fields are marked *

error: Content is protected !!