ಕೊರಗರ ಅಹೋರಾತ್ರಿ ಧರಣಿ: ಅಹವಾಲು ಆಲಿಸಿದ ಸ್ಪೀಕರ್- ಬೇಡಿಕೆ ಈಡೇರಿಕೆಗೆ ಉನ್ನತ ಮಟ್ಟದ ಸಭೆ

ಉಡುಪಿ: ಕೊರಗ ಸಮುದಾಯದ ಯುವಜನತೆಗೆ ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿ ಹಾಗೂ ಕೃಷಿಭೂಮಿ ಹಕ್ಕುಪತ್ರ ಮಂಜೂರಾತಿಗೆ ಆಗ್ರಹಿಸಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ 10 ದಿನಕ್ಕೆ ಕಾಲಿಟ್ಟಿದೆ.

ಬುಧವಾರ ಧರಣಿ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿದ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಆಗಮಿಸಿ, ಧರಣಿ ನಿರತರ ಬೇಡಿಕೆಗಳ ಮನವಿ ಸ್ವೀಕರಿಸಿದರು. ನಂತರ ಸರ್ಕಾರದ ಮಟ್ಟದಲ್ಲಿ ತಾಂತ್ರಿಕ ಸಮಸ್ಯೆಗಳನ್ನು ವಿವರಿಸಿ, ನಿಮ್ಮ ನೋವನ್ನು ಅರ್ಥ ಮಾಡಿಕೊಂಡು ಪರಿಹಾರ ಕಂಡುಕೊಳ್ಳಲು ಇಲ್ಲಿಗೆ ಬಂದಿದ್ದೇನೆ. ಆದುದರಿಂದ ಕಳೆದ 10 ದಿನಗಳಿಂದ ನಡೆಸುತ್ತಿರುವ ಈ ಧರಣಿಯನ್ನು ಇಲ್ಲಿಗೆ ಕೈಬಿಡಬೇಕು. ಆ ಮೂಲಕ ನಾವೆಲ್ಲ ಜೊತೆಜೊತೆಯಾಗಿ ಸಾಗಬೇಕು ಎಂದು ಖಾದರ್ ಮನವಿ ಮಾಡಿದರು.

ನಂತರ ಪತ್ರಕರ್ತರ ಜೊತೆ ಮಾತನಾಡಿದ ಅವರು, ಕೊರಗ ಸಮುದಾಯ ತನ್ನ ನೋವನ್ನ ವ್ಯಕ್ತಪಡಿಸಿದೆ. ಕೊರಗರು ನಮ್ಮ ಕರಾವಳಿಯ ಮುಗ್ಧ ಸಂಸ್ಕೃತಿಯ ಪ್ರತಿಬಿಂಬವಾಗಿದ್ದು, ಸಮುದಾಯದ ಜೊತೆ ನಿಲ್ಲಬೇಕಾಗಿರುವುದು ಜನಪ್ರತಿನಿಧಿಗಳ ಕರ್ತವ್ಯ. ಹೊರಗುತ್ತಿಗೆ ಎಲ್ಲಾದರೂ ವಿದ್ಯಾವಂತರಿಗೆ ಕೆಲಸ ಕೊಡಿ ಎಂಬುದು ಅವರ ಒತ್ತಾಯವಾಗಿತ್ತು. ಈ ಬಗ್ಗೆ ಅಧಿಕಾರಿಗಳ ಜೊತೆ ತಕ್ಷಣವೇ ಚರ್ಚೆ ಮಾಡುತ್ತೇನೆ.

ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ಇಟ್ಟಿರುವ ಬೇಡಿಕೆಗಳನ್ನು ಆ.15 ರ ನಂತರ ಬೆಂಗಳೂರಿನಲ್ಲಿ ಕಂದಾಯ ಇಲಾಖೆಯ ಮಂತ್ರಿಗಳು, ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಚರ್ಚಿಸಿ, ಕೊರಗ ಸಮುದಾಯದ ಅಭಿವೃದ್ಧಿ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಹಿಂದೆ ಆರೋಗ್ಯ ಮಂತ್ರಿಯಾಗಿದ್ದಾಗ ಕೊರಗ ಸಮುದಾಯಕ್ಕೆ ಸಾಕಷ್ಟು ಸಹಾಯ ಮಾಡಿದ್ದೇನೆ. ನೇರ ನೇಮಕಾತಿ ಸಾಧ್ಯವಿಲ್ಲ ಕೆಲ ಕಾನೂನಿನ ತಿದ್ದುಪಡಿಗಳು ಆಗಬೇಕು, ಮೀಸಲಾತಿಯಲ್ಲಿ ರೋಷ್ಟರ್ ಮತ್ತು ಮೆರಿಟ್ ಬಹಳ ಮುಖ್ಯವಾಗಿದೆ ಎಂದರು.

ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ ಮಾತನಾಡಿ, ಧರಣಿ ಅಂತ್ಯಗೊಳಿಸುವ ಬಗ್ಗೆ ಒಕ್ಕೂಟದ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಕೊರಗ ಸಮುದಾಯದ ಮುಖಂಡರಾದ ಸಂಜೀವ, ಶೇಖರ್, ಬೊಗ್ರ ಕೊಕ್ಕರ್ಣೆ, ಪುತ್ರನ್ ಹೆಬ್ರಿ, ಪವಿತ್ರ ಮೊದಲಾದವರು ಉಪಸ್ಥಿತರಿದ್ದರು.

ಅಸ್ಪೃಶ್ಯತೆಯಿಂದ ಸ್ವಉದ್ಯೋಗ ಮಾಡುವುದು ಹೇಗೆ?

ತಮ್ಮ ಸಮಸ್ಯೆಗಳ ಬಗ್ಗೆ ಸ್ವೀಕರ್ ಯು.ಟಿ.ಖಾದರ್ ಅವರಲ್ಲಿ ಅಳಲು ತೋಡಿಕೊಂಡ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ, ಇಂದಿಗೂ ನಮ್ಮ ಕೈಯಿಂದ ಒಂದು ಲೋಟ ನೀರು ಕೂಡ ಕುಡಿಯಲು ಹಿಂದೇಟು ಹಾಕುವ ಈ ಸಮಾಜದಲ್ಲಿ ನಮ್ಮವರು ಸ್ವಉದ್ಯೋಗ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಸಮುದಾಯದ ಹಿರಿಯರು ಬುಟ್ಟಿ ನೇಯ್ದು ತಮ್ಮ ಮಕ್ಕಳಿಗೆ ಕಷ್ಟಪಟ್ಟು ಶಿಕ್ಷಣ ಕೊಟ್ಟಿದ್ದಾರೆ. ಆದರೆ ಇಂದು ಅವರಿಗೆ ಶಿಕ್ಷಣಕ್ಕೆ ಅನುಗುಣವಾಗಿ ಸರಕಾರಿ ಉದ್ಯೋಗ ಸಿಗುತ್ತಿಲ್ಲ. ನಮ್ಮವರನ್ನು ಕೇವಲ ಸ್ವಚ್ಛತೆ ಕೆಲಕ್ಕೆ ಮಾತ್ರ ನೇಮಕ ಮಾಡುತ್ತಾರೆ. ಅದು ಬಿಟ್ಟರೆ ಬೇರೆ ಯಾವುದೇ ಉದ್ಯೋಗದಲ್ಲಿ ಅವಕಾಶ ಸಿಗುತ್ತಿಲ್ಲ. ಸ್ವಚ್ಛತೆ ಕೆಲಸದಿಂದ ನಮ್ಮವರು ಅನಾರೋಗ್ಯ ಹಾಗೂ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಇದರಿಂದ ನಮ್ಮ ಜನಸಂಖ್ಯೆ ಕ್ಷೀಣಿಸುತ್ತಿದೆ ಎಂದರು.

ಉದ್ಯೋಗ ಇಲ್ಲದೆ ನಮ್ಮ ಜನ ಸಾಯುತ್ತಿದ್ದಾರೆ. ಬುಟ್ಟಿ ನೇಯ್ದು ಜೀವನ ಸಾಗಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಸರಕಾರ ನೀಡುವ ಸ್ವಉದ್ಯೋಗ ಅನುದಾನಗಳೆಲ್ಲವೂ ಭೂಮಿ ಆಧಾರಿತಗಳಾಗಿವೆ. ಆದರೆ ನಮ್ಮಲ್ಲಿ ಭೂಮಿಯೇ ಇಲ್ಲದಿದ್ದರೇ ಸ್ವಉದ್ಯೋಗ ಮಾಡುವುದು ಹೇಗೆ?:- ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ

Leave a Reply

Your email address will not be published. Required fields are marked *

error: Content is protected !!