ಕರಾವಳಿಗೆ ನೀಡಿದ ಅನುದಾನ ಬಹಿರಂಗ ಚರ್ಚೆಗೆ ಬನ್ನಿ- ಕಾಂಗ್ರೆಸ್ ನಾಯಕರಿಗೆ ಶಾಸಕ ಯಶ್ಪಾಲ್ ಸುವರ್ಣ ಆಹ್ವಾನ

ಉಡುಪಿ: ಮುಡಾ ಹಾಗೂ ವಾಲ್ಮೀಕಿ ನಿಗಮದ ಹಗರಣ ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ಪ್ರತಿಭಟನೆ

ಉಡುಪಿ: ರಾಜ್ಯ ಕಾಂಗ್ರೆಸ್ ಸರಕಾರದ ಮುಡಾ ಹಗರಣ ಹಾಗೂ ವಾಲ್ಮೀಕಿ ನಿಗಮದ ಹಗರಣವನ್ನು ಖಂಡಿಸಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ನೇತೃತ್ವದಲ್ಲಿ ಮಣಿಪಾಲ ರಜತಾದ್ರಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು‌.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ‌ ಕಾರ್ಯಕರ್ತರು ಕಾಂಗ್ರೆಸ್ ಸರಕಾರದ ವಿರುದ್ಧ ದಿಕ್ಕಾರ ಕೂಗಿದರು. ನೈತಿಕ ಹೊಣೆಹೊತ್ತು ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಉಡುಪಿ‌ ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ, ನಿರಂತರ ಹಗರಣಗಳ ಸರದಾರ ಎಂಬ ಬಿರುದನ್ನು ಸಿದ್ದರಾಮಯ್ಯ ಸಂಪುಟದ ಸಚಿವರು ಪಡೆದುಕೊಂಡಿದ್ದಾರೆ. ಗ್ಯಾರಂಟಿ ಯೋಜನೆ ಮೂಲಕ ಜನರನ್ನು ಮೋಡಿ ಮಾಡಿ, ಅಧಿಕಾರಕ್ಕೆ ಬಂದ ಕಾಂಗ್ರೆಸ್, ಇದೀಗ ಇಡೀ ರಾಜ್ಯದ ಜನತೆಗೆ ಮೋಸ ಮಾಡಿದೆ. ರಾಜ್ಯದ ಅಭಿವೃದ್ಧಿ ಬಿಟ್ಟು ತಮ್ಮ ಕುಟುಂಬದ ಆಸ್ತಿ ವೃದ್ಧಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಉಡುಪಿ ಜಿಲ್ಲೆಯಲ್ಲಿ ಬಹಳಷ್ಟು ಕಾಂಗ್ರೆಸ್ ನಾಯಕರು ವಿಸಿಟಿಂಗ್ ಕಾರ್ಡ್, ಮನವಿ ಇಟ್ಟುಕೊಂಡು ಮಾಧ್ಯಮಗಳ ಮುಂದೆ ಹೋಗುತ್ತಿದ್ದಾರೆ. ನಿಮಗೆ ತಾಕತ್ ಇದ್ದರೆ 14 ತಿಂಗಳ ಅವಧಿಯಲ್ಲಿ ಉಡುಪಿ ಸಹಿತ ಕರಾವಳಿಯ ಮೂರು ಜಿಲ್ಲೆಗಳಿಗೆ ನಿಮ್ಮ ಸರಕಾರದಿಂದ ಯಾವುದೆಲ್ಲ ಅನುದಾನ ಬಂದಿದೆ ಎಂಬ ಬಹಿರಂಗ ಚರ್ಚೆಗೆ ಬನ್ನಿ. ನಿಮ್ಮಲ್ಲಿ ಗಂಡಸ್ತನ ಇದ್ದರೆ ಮೊದಲು ಅದನ್ನು ಮಾಡಿ ತೋರಿಸಿ. ಅದನ್ನು ಬಿಟ್ಟು ಫೇಸ್ ಬುಕ್, ಸೊಶಿಯಾಲ್ ಮೀಡಿಯಾಕ್ಕೆ ಸೀಮಿತರಾಗಬೇಡಿ ಎಂದು ಗುಡುಗಿದರು.
ಬಳಿಕ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ವಿಜಯಕುಮಾರ್ ಕೊಡವೂರು, ಬಿಜೆಪಿ ಮುಖಂಡರಾದ ಐರೋಡಿ ವಿಠಲ ಪೂಜಾರಿ, ರಾಜೇಶ್ ಕುಮಾರ್ ಕಾವೇರಿ, ಪೃಥ್ವಿರಾಜ್ ಹೆಗ್ಡೆ ಬಿಲ್ಲಾಡಿ, ಕಿರಣ್ ಕುಮಾರ್ ಬೈಲೂರು, ಸಂಧ್ಯಾ ರಮೇಶ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಇದ್ದರು.

Leave a Reply

Your email address will not be published. Required fields are marked *

error: Content is protected !!