ವಯನಾಡ್ ದುರಂತ ಸ್ಥಳಕ್ಕೆ ತೆರಳುತ್ತಿದ್ದ ಕಾರು ಅಪಘಾತ- ಆರೋಗ್ಯ ಸಚಿವೆ ವೀಣಾ ಜಾರ್ಜ್‌ಗೆ ಗಾಯ
ಕಾಸರಗೋಡು: ವಯನಾಡ್ ಭೂ ಕುಸಿತ ದುರಂತ ಸ್ಥಳಕ್ಕೆ ತೆರಳುತ್ತಿದ್ದ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ವಾಹನ ಮಲಪ್ಪುರಂ ಜಿಲ್ಲೆಯ ಮಂಜೇರಿಯಲ್ಲಿ ಅಪಘಾತಕ್ಕೀಡಾಗಿದೆ ಎಂದು ತಿಳಿದು ಬಂದಿದೆ.
ದುರಂತ ಸ್ಥಳಕ್ಕೆ ತೆರಳುತ್ತಿದ್ದ ವೇಳೆ ಮಂಜೇರಿ ಬಳಿ ಸಚಿವೆಯ ವಾಹನ ಎರಡು ದ್ವಿಚಕ್ರ ವಾಹಕ್ಕೆ ಢಿಕ್ಕಿಯಾಗಿದ್ದು, ಸಚಿವೆ ಸಹಿತ ದ್ವಿಚಕ್ರ ವಾಹನದಲ್ಲಿದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ವೀಣಾ ಜಾರ್ಜ್ ಕೈಗೆ ಗಾಯಗಳಾಗಿದ್ದು,, ಬೈಕ್‌ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಎರಡು ದಿನಗಳ ಶೋಕಾಚರಣೆ
ಭೂಕುಸಿತದಿಂದ ನೂರಾರು ಜನರು ಸಾವನ್ನಪ್ಪಿದ ನಂತರ ಕೇರಳದಲ್ಲಿ 2 ದಿನಗಳ ಶೋಕಾಚರಣೆಯನ್ನು ಆಚರಿಸಲಾಗುತ್ತಿದ್ದು, ಕೇರಳ ವಿಧಾನಸಭೆಯಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಲಾಗಿದೆ.ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಸಮರೋಪಾದಿ ಯಲ್ಲಿ ಕೈಗೊಳ್ಳಲಾಗುತ್ತಿದೆ. ಎನ್‌ಡಿಆರ್‌ಎಫ್, ಕೇರಳ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಭಾರತೀಯ ಸೇನಾ ಯೋಧರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಪರಿಹಾರ ಮತ್ತು ರಕ್ಷಣ ಕಾರ್ಯ ಕೈಗೊಳ್ಳಲು ಎನ್‌ಡಿಆರ್‌ಎಫ್ 4 ತಂಡಗಳನ್ನು ನಿಯೋಜಿಸಿದೆ. ಅವುಗಳು ಸಾಮಗ್ರಿ, ಯಂತ್ರಗಳು, ಆಧುನಿಕ ಬೋಟ್‌ಗಳು, ಔಷಧಗಳನ್ನು ಹೊಂದಿವೆ. ಪ್ರತೀ ತಂಡದಲ್ಲಿ 30 ಸದಸ್ಯರಿದ್ದು ಈಗಾಗಲೇ ಕಾರ್ಯಾಚರಣೆಯಲ್ಲಿ ತೊಡಗಿದೆ.
150 ದಾಟಿದ ಸಾವಿನ ಸಂಖ್ಯೆ: ಮಣ್ಣಿನಡಿಯಲ್ಲಿ ಸಿಲುಕಿದ ದೇಹಗಳು- ನಾಪತ್ತೆಯಾದವರ ಲೆಕ್ಕವೇ ಇಲ್ಲ; 4 ಸೇನಾ ತಂಡಗಳ ಕಾರ್ಯಾಚರಣೆ
ಭೂ ಕುಸಿತದಿಂದಾಗಿ ಭಾರೀ ದುರಂತ ಸಂಭವಿಸಿದ ವಯನಾಡಿನಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಿದ್ದು, 150 ಆಗಿದೆ ಎಂದು ತಿಳಿದು ಬಂದಿದೆ. ಈ ಪೈಕಿ 67 ಮೃತದೇಹಗಳ ಗುರುತು ಪತ್ತೆಯಾಗಿದೆ. 191 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಈ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. 3069 ಮಂದಿ ವಿವಿಧ ಸಾಂತ್ವನ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಮಣ್ಣು, ಮರದ ದಿಮ್ಮಿಗಳಡಿಯಲ್ಲಿ ಛಿದ್ರಗೊಂಡಿರುವ ಮೃತದೇಹಗಳು ಪತ್ತೆಯಾಗತೊಡಗಿದೆ. ಬುಧವಾರ ಬೆಳಗ್ಗೆ ಮತ್ತೆ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದ್ದು , ನಾಲ್ಕು ತಂಡಗಳಾಗಿ 150 ಮಂದಿ ಕಾರ್ಯಾಚರಣೆ ಗೆ ಇಳಿದಿದ್ದಾರೆ. ಇದರಲ್ಲಿ ಸೇನೆ, NDRF, ಅಗ್ನಿ ಶಾಮಕ ದಳ, ಆರೋಗ್ಯ ತಂಡ ಒಳಗೊಂಡಿದೆ. ಇವರಿಗೆ ಪೊಲೀಸರು, ಅರಣ್ಯ ಇಲಾಖೆ, ಸ್ವಯಂ ಸೇವಕರು ಸಾಥ್ ನೀಡಲಿದ್ದಾರೆ ಎಂದು ವಯನಾಡ್ ಜಿಲ್ಲಾಡಳಿತ ತಿಳಿಸಿದೆ. ಇನ್ನು ಹವಾಮಾನ ಪೂರಕವಾಗಿದ್ದರೆ, ವಾಯು ಸೇನೆಯ ತಂಡದಿಂದ ಹೆಲಿಕಾಪ್ಟರ್ ಮೂಲಕ ಏರ್ ಲಿಫ್ಟ್ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಅಲ್ಲದೇ ಮುಂಡಕ್ಕೈ ಪ್ರದೇಶದಲ್ಲಿ ಕಾರ್ಯಾಚರಣೆ ಸಲುವಾಗಿ ಸೇನೆ ತಾತ್ಕಾಲಿಕ ಸೇತುವೆ ನಿರ್ಮಿಸಿದೆ. ಇದನ್ನು ‘ಬೆಲಿ ಸೇತುವೆ’ ಎನ್ನಲಾಗುತ್ತಿದ್ದು, ಇದರ ಮೂಲಕ ಸಣ್ಣ ಜೆಸಿಬಿಯಂತಹ ವಾಹನಗಳಿಗೂ ಸಂಚರಿಸಲು ಸಾಧ್ಯವಿದೆ.
ಅಲ್ಲದೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ಬೆಳಗ್ಗೆ 9.30ಕ್ಕೆ ತುರ್ತು ಸಚಿವ ಸಂಪುಟ ಸಭೆ ನಡೆಯಲಿದೆ.