ವಯನಾಡು ಭೂಕುಸಿತ: ಸಾವಿನ ಸಂಖ್ಯೆ 123ಕ್ಕೆ ಏರಿಕೆ- ರಾಜ್ಯದ ಇಬ್ಬರು ಮೃತ್ಯು

ತಿರುವನಂತಪುರ: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂ ಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 123ಕ್ಕೆ ಏರಿಕೆಯಾಗಿದ್ದು, ಇದರಲ್ಲಿ ಕರ್ನಾಟಕ ಮೂಲದ ಇಬ್ಬರು ಕೂಡ ಸೇರಿದ್ದಾರೆ.

ಕೇರಳದ ವಯನಾಡ್ ಜಿಲ್ಲೆಯಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಒಂದಿಡೀ ಪಟ್ಟಣವೇ ಭೂ ಕುಸಿತದಲ್ಲಿ ಕೊಚ್ಚಿ ಹೋಗಿದೆ. ವಿನಾಶಕಾರಿ ದುರಂತದಲ್ಲಿ ಈ ವರೆಗೂ ಕನಿಷ್ಟ 123 ಮಂದಿ ಸಾವಿಗೀಡಾಗಿದ್ದು, ಈ ಪೈಕಿ ಕರ್ನಾಟಕದ ಚಾಮರಾಜನಗರದ ಇಬ್ಬರು ಸೇರಿದ್ದಾರೆ ಎಂದು ತಿಳಿದುಬಂದಿದೆ.

ಚಾಮರಾಜನಗರ ಜಿಲ್ಲೆಯ ಪುಟ್ಟ ಸಿದ್ದಿ(62) ಹಾಗೂ ರಾಣಿ ಎಂಬುವರ ತಾಯಿ ಭೂಕುಸಿತದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಅವರು ವಯನಾಡಿನ ಮೆಪ್ಪಾಡಿಯಲ್ಲಿ ವಾಸವಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಚಾಮರಾಜನಗರದ ಇಬ್ಬರ ನಾಪತ್ತೆ

ಇನ್ನು ಚಾಮರಾಜನಗರ ತಾಲೂಕು ಇರಸವಾಡಿ ಮೂಲದ ರಾಜನ್ ಹಾಗೂ ರಜನಿ ನಾಪತ್ತೆಯಾಗಿದ್ದಾರೆ. ಇವರು ಕಳೆದ ಮೂವತ್ತು ವರ್ಷಗಳಿಂದ ಕೇರಳದ ಚೂರಲ್ಲಾದಲ್ಲಿ ವಾಸವಿದ್ದರು. ಇದೀಗ ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾಗಿದ್ದು, ರಾಜನ್, ರಜನಿಗಾಗಿ ಶೋಧಕಾರ್ಯ ಮುಂದುವರಿದಿದೆ ಎಂದು ಚಾಮರಾಜನಗರ ಜಿಲ್ಲಾಡಳಿತ ಮಾಹಿತಿ ನೀಡಿದೆ. ಮಾತ್ರವಲ್ಲದೇ ಮುಂಡಕೈನ ಟೀ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದ ಚಾಮರಾಜನಗರದ ಗುಂಡ್ಲುಪೇಟೆಯ ಝಾನ್ಸಿರಾಣಿ, ಎರಡೂವರೆ ವರ್ಷದ ಪುತ್ರ ನಿಹಾಲ್ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಸಾವಿನ ಸಂಖ್ಯೆ 123ಕ್ಕೆ ಏರಿಕೆ

ಕೇರಳದ ವಯನಾಡು ಜಿಲ್ಲೆಯ ಮೆಪ್ಪಾಡಿ, ಮುಂಡಕೈ, ಚೂರಲ್ಮಲ ಗ್ರಾಮದಲ್ಲಿ ಸಂಭವಿಸಿದ ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 123ಕ್ಕೆ ಏರಿಕೆಯಾಗಿದೆ ಭೂಕುಸಿತ ಸ್ಥಳದಲ್ಲಿ ಸುಮಾರು 98 ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಇನ್ನು 128 ಜನರಿಗೆ ಗಾಯಗೊಂಡಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!