ಕೋಟ: ಉದ್ಯಮಿ ಮನೆಗೆ ನಕಲಿ ಐಟಿ ಅಧಿಕಾರಿಗಳ ದಾಳಿ!

ಕೋಟ: ಮಣೂರಿನ ಉದ್ಯಮಿಯೊಬ್ಬರ ಮನೆಗೆ ಬೆಳಂಬೆಳಗ್ಗೆ ನಕಲಿ ಐಟಿ ಅಧಿಕಾರಿಗಳ ಮತ್ತು ಪೋಲೀಸರ ಸೋಗಿನಲ್ಲಿ ಬಂದ ಅಪರಿಚಿತರ ತಂಡವೊಂದು ಊರಿನಲ್ಲಿ ಆತಂಕದ ವಾತಾವರಣ ಉಂಟು ಮಾಡಿದೆ.

ಈ ಬಗ್ಗೆ ಮನೆ ಮಾಲಕಿ ಮಣೂರು ಗ್ರಾಮದ ಕವಿತಾ (34) ಅವರು ಕೋಟ ಪೊಲೀಸರಿಗೆ ದೂರು ನೀಡಿದ್ದಾರೆ.

ಘಟನೆಯ ವಿವರ: ಜು.25ರಂದು ಬೆಳಿಗ್ಗೆ 8.30 ಗಂಟೆಗೆ ಮನೆಯ ಹೊರಗಿನಿಂದ ಯಾರೋ ಬಾಗಿಲು ಬಡಿದ ಶಬ್ದವಾಗಿತ್ತು. ಆಗ ನಿರ್ಲಕ್ಷಿಸಿದ್ದು 9 ಗಂಟೆಗೆ ಹೊರಗೆ ಬಂದು ನೋಡಿದಾಗ ಯಾರೂ ಇರಲಿಲ್ಲ. ಈ ನಡುವೆ ಮನೆಯ ಸಿಸಿಟಿವಿ ಮೇಲೆ ನಿಗಾ ಇಡುತ್ತಿರುವ ಕುಂದಾಪುರದ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ಕೃಷ್ಣ ಅವರು ಕರೆ ಮಾಡಿ, ನಿಮ್ಮ ಮನೆಗೆ ಸ್ಟಿಫ್ಟ್ ಮತ್ತು ಇನೋವಾ ಕಾರಿನಲ್ಲಿ 6-8 ಜನ ಮಂದಿ ಆಗಮಿಸಿ ಗೇಟು ತೆರೆಯಲು ಯತ್ನಿಸಿದ್ದರು. ಸಾಧ್ಯವಾಗದಿದ್ದಾಗ ಕಾಂಪೌಂಡ್ ಹಾರಿ ಮನೆಗೆ ಬಂದು ಬಾಗಿಲು ಹಾಗೂ ಕಿಟಕಿಯನ್ನು ಬಲಾತ್ಕಾರವಾಗಿ ತೆಗೆಯಲು ಪ್ರಯತ್ನಿಸಿರುವುದಾಗಿಯೂ ಗೇಟು ತೆರೆಯದಾಗ ವಾಪಾಸು ಹೋಗಿರುವುದಾಗಿ ತಿಳಿಸಿದ್ದಾರೆ.

ಬಂದವರು ಯಾರು ಎನ್ನುವ ನಿಟ್ಟಿನಲ್ಲಿ ಪೊಲೀಸ್ ತನಿಖೆ ನಡೆಯುತ್ತಿದೆ. ಎರಡು ಪ್ರತ್ಯೇಕ ತಂಡಗಳು ಬೇರೆ ಬೇರೆ ಕಡೆ ಹೋಗಿ ತನಿಖೆ ನಡೆಸುತ್ತಿವೆ. ದರೋಡೆ ಮಾಡುವ ಉದ್ದೇಶ ಇತ್ತೇ ಎನ್ನುವುದು ಸದ್ಯದ ಅನುಮಾನ. ಐಟಿ, ಇಡಿ ಮೊದಲಾದ ಸರಕಾರಿ ಇಲಾಖೆ ಅಧಿಕಾರಿಗಳೇ ಆಗಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ ಬಾಗಿಲು ತೆರೆಸುತ್ತಿದ್ದರು ಅಥವಾ ಬಾಗಿಲು ತೆರೆಯಲು ಬೇಕಾದ ಸೂಕ್ತ ಕಾನೂನು ವ್ಯವಸ್ಥೆ ಮಾಡುತ್ತಿದ್ದರು. ಆಗಂತುಕರು ವಿಗ್ ಇತ್ಯಾದಿ ಧರಿಸಿ ಗುರುತು ಮರೆಮಾಚುವಂತೆ ಕಂಡುಬರುತ್ತಿತ್ತು.

ವಾಹನದಲ್ಲಿ ಸಫಾರಿ ಧರಿಸಿ ಅಧಿಕಾರಿಯಂತೆ ಕಾಣುವ ಒಬ್ಬ ಮತ್ತು ನಾಲ್ವರು ಹಾಗೂ ಇನ್ನೊಂದು ವಾಹನದಲ್ಲಿ ಪೊಲೀಸ್ ಸಮವಸ್ತ್ರ ಧರಿಸಿದ್ದವರು ಇದ್ದರು.ಈ ತಂಡ ಐಟಿ, ಇ.ಡಿ.ಯವರು ಆಗಿರಬಹುದು ಎಂಬ ಅನುಮಾನ ಮನೆಯವರಲ್ಲಿತ್ತು.

ಒಟ್ಟು 8 ಮಂದಿ ಇದ್ದರು ಎಂದು ಶಂಕಿಸಲಾಗಿದೆ. 6 ಜನ ಇರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಳೆಹನಿಯುತ್ತಿದ್ದಾಗ ಕಾರಿನಿಂದ ಇಳಿದ ತಂಡ ಗೇಟು ತೆರೆಯಲು ಯತ್ನಿಸಿದೆ. ಸಾಧ್ಯವಾಗದಿದ್ದಾಗ ಗೇಟಿಗೆ ಗುದ್ದಿ ಸದ್ದು ಮಾಡಿದೆ. ಆ ಬಳಿಕ ಇನ್ನೊಂದು ಮಗ್ಗುಲಿನಿಂದ ಹೋಗಿ ಕಾಂಪೌಂಡ್‌ ನಿಂದ ಬಾವಿಕಟ್ಟೆಗೆ ಇಳಿದು ಅಂಗಳಕ್ಕೆ ಹೋಗಿ ಮುಖ್ಯ ಬಾಗಿಲ ಬಳಿ ಹೋಗಿದೆ. ಆಗಲೂ ಬಾಗಿಲು ತೆರೆಯದಿದ್ದಾಗ ತಂಡ ಮರಳಿದೆ.

ಮನೆಯವರು ಬಾಗಿಲು ತೆರೆಯದ ಕಾರಣ ಮರಳಿದ ಆಗಂತುಕರು ಸಾಸ್ತಾನ ಟೋಲ್ ಮಾರ್ಗದಲ್ಲಿ ಸಾಗದೆ, ಬಾರ್ಕೂರು ರಸ್ತೆ ಮೂಲಕ ಟೋಲ್ ತಪ್ಪಿಸಿ ಹೋಗಿದ್ದಾರೆ. ವಾಹನ ಅತಿವೇಗದಲ್ಲಿ ಸಾಗಿದೆ ಎಂದೂ ಹೇಳಲಾಗುತ್ತಿದೆ. ಕಾರಿನ ನಂಬರ್ ಪ್ಲೇಟ್‌ಗಳ ಗುರುತು ಹಚ್ಚಲೂ ಸಾಧ್ಯವಿಲ್ಲದಂತೆ ತಂಡ ಸಿದ್ದತೆ ಮಾಡಿತ್ತು ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!