ಉಡುಪಿ ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸಂಘದ ಮಹಾಸಭೆ
ಉಡುಪಿ: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಉಡುಪಿ ಜಿಲ್ಲಾ ಸಮಿತಿಯ ಮಹಾ ಸಭೆಯು ಬುಧವಾರ ಉಡುಪಿ ಹೊಟೇಲ್ ಕಿದಿಯೂರ್‌ನ ಮಾಧವ ಕೃಪಾ ಸಭಾಭವನದಲ್ಲಿ ಜರಗಿತು.
ಮುಖ್ಯ ಅತಿಥಿಯಾಗಿ ಸಂಘದ ರಾಜ್ಯಧ್ಯಕ್ಷ ರಮೇಶ್ ಮಾತನಾಡಿ, ನಮ್ಮೀ ಸಂಘದ ದ್ಯೇಯೋದ್ದೇಶ, ವಿದ್ಯುತ್ ಗುತ್ತಿಗೆದಾ ರರಿಗೆ ತಮ್ಮ ವೃತ್ತಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಲು ಸಹಕರಿಸಬೇಕು. ಅವರಿಗೆ ಎದುರಾಗುವ ಅಡೆ -ತಡೆಗಳನ್ನು ಹೋಗಲಾಡಿಸಬೇಕು. ಆರ್ಥಿಕವಾಗಿ ಕುಗ್ಗಿ ಹೋಗಿರುವ ವರಿಗೆ ಸೂರಿನ ವ್ಯವಸ್ಥೆ, ಅನಾರೋಗ್ಯದ ಕಾರಣ ಚಿಕಿತ್ಸೆ ಮಾಡಲು ಅಸರ್ಮಥರಾಗಿದ್ದವರಿಗೆ ವೈದ್ಯಕೀಯ ಸೌಲಭ್ಯ ಒದಗಿಸಿ ಕೊಟ್ಟು ಬೆಂಬಲಿಸುವ ಕೆಲಸವನ್ನು ನಮ್ಮ ಸಂಘ ಮಾಡುತ್ತಿದೆ ಎಂದರು.
ಸಭಾಧ್ಯಕ್ಷತೆ ಜಿಲ್ಲಾಧ್ಯಕ್ಷ ಶ್ರಿಕಾಂತ್ ಶೆಣೈ ವಹಿಸಿದ್ದರು. ಕೇಂದ್ರ ಸಮಿತಿ ಸದಸ್ಯ ಪ್ರಭಾಕರ ನೇರಂಬಳ್ಳಿ, ಜಿಲ್ಲಾ ಉಪಾಧ್ಯಕ್ಷ ಕೃಷ್ಣ ಕುಲಾಲ್ ಮಾತಾಡಿದರು. ಈ ಸಂದರ್ಭದಲ್ಲಿ 24 ಎಸ್‌ಎಸ್‌ಎಲ್‌ಸಿ ಮತ್ತು 25 ಪಿಯುಸಿಯ ಪ್ರತಿ ಭಾವಂತ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ತಾಲೂಕಿನ ಹಿರಿಯ ಗುತ್ತಿಗೆದಾರರಾದ ಮಂಜುನಾಥ ರಾವ್ ಬೈಂದೂರು, ಸುಧಾಕರ ಪೂಜಾರಿ ಕುಂದಾಪುರ, ಅಶೋಕ್ ಪೂಜಾರಿ ಬ್ರಹ್ಮಾವರ, ರಮೇಶ್ ಪೂಜಾರಿ ಉಡುಪಿ, ನಾಗೇಶ್ ಕೋಟ್ಯಾನ್ ಕಾಪು, ಕೆ.ಜಯಂತ್ ಕಾರ್ಕಳ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗುತ್ತಿಗೆದಾರರ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ ಮಾಡಲಾಯಿತು.
ಅರವಿಂದ ಭಟ್ ಅವರನ್ನು ಲೆಕ್ಕಪರಿಶೋಧಕರಾಗಿ ಆಯ್ಕೆ ಮಾಡ ಲಾಯಿತು. ರಾಜ್ಯ ಕೋಶಾಧಿಕಾರಿ ಚಂದ್ರ ಬಾಬು, ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯ ರವಿರಾಜ್ ಶೆಟ್ಟಿ, ಕೇಂದ್ರ ಯುವ ಘಟಕದ ಸಂಚಾಲಕ ಅಶೋಕ್ ಪೂಜಾರಿ, ಸಂಘದ ’ಭಾರತ್’ ಪತ್ರಿಕೆಯ ಕೇಂದ್ರ ಸಮಿತಿಯ ವರದಿಗಾರ ಅನ್ವರ್ ಅಲಿ ಕಾಪು ಉಪಸ್ಥಿತರಿದ್ದರು.
ಜಿಲ್ಲಾ ಜತೆ ಕಾರ್ಯದರ್ಶಿ ರವಿಚಂದ್ರ ವಿ.ಕೆ. ಸ್ವಾಗತಿಸಿದರು. ವರದಿಯನ್ನು ಕಾರ್ಯದರ್ಶಿ ಸುರೇಶ್ ಜತ್ತನ್ನ ವಾಚಿಸಿದರು. ಲೆಕ್ಕಪತ್ರವನ್ನು ಕೋಶಾಧಿಕಾರಿ ಆನಂದ ಸೇರಿಗಾರ್ ಮಂಡಿಸಿದರು. ಕೇಂದ್ರ ಸಮಿತಿಯ ಸಾಂಸ್ಕೃತಿಕ ಸಂಚಾಲಕ ದಿನೇಶ್ ನಾಯಕ್ ಕಡ್ತಲ ಕಾರ್ಯಕ್ರಮ ನಿರೂಪಿಸಿದರು. ಅನ್ವರ್ ಅಲಿ ಕಾಪು ವಂದಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.