ಕಾರ್ಕಳ: ಪ್ಲಾಟ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ- ಮಹಿಳೆಗೆ ಗಾಯ ಲಕ್ಷಾಂತರ ರೂ‌. ನಷ್ಟ

ಕಾರ್ಕಳ: ಬಹುಮಹಡಿ ಕಟ್ಟಡವೊಂದರ 4ನೇ ಮಹಡಿಯಲ್ಲಿ ಪ್ಲಾಟ್ ನ ಪ್ಯಾಸೇಜ್ ನಲ್ಲಿ ಇಟ್ಟಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಲಕ್ಷಾಂತರ ರೂಪಾಯಿ ನಷ್ಟವಾದ ಘಟನೆ ಕಾರ್ಕಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪುಲ್ಕೇರಿ ಬೈಪಾಸ್ ಬಳಿ ಶನಿವಾರ ರಾತ್ರಿ ನಡೆದಿದೆ.

ಕಾರ್ಕಳ ಬೈಪಾಸ್ ಬಳಿಯ ಶ್ರೀಕೃಷ್ಣ ಎಂಕ್ಲೇವ್ ಕಟ್ಟಡದ 4ನೇ ಮಹಡಿಯಲ್ಲಿ ಸುಮಾರು 6 ಪ್ಲಾಟ್ ಗಳಿದ್ದು, ಉಡುಪಿ ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಮಾಜಿ ಅಧ್ಯಕ್ಷ ಇರ್ವತ್ತೂರು ಉದಯ ಎಸ್ ಕೋಟ್ಯಾನ್ ಎಂಬವರ ವಸತಿಗೃಹದ ಹೊರಾಂಗಣದಲ್ಲಿ ಇರಿಸಲಾಗಿದ್ದ ಗ್ಯಾಸ್ ಸಿಲಿಂಡರ್ ಶನಿವಾರ ತಡರಾತ್ರಿ 10:30ರ ವೇಳೆಗೆ ಹೊತ್ತಿ ಉರಿಯಲು ಶುರುವಾಗಿತ್ತು.

ಫ್ಲ್ಯಾಟ್ ನಿಂದ ಹೊರಹೋಗಲು ಸಾಧ್ಯವಾಗದೆ, ಉದಯ ಕೋಟ್ಯಾನ್ ಅವರು ಮನೆಯ ಮೇಲ್ಭಾಗಕ್ಕೆ ಓಡಿ ಹೋಗಿ ಸಹಾಯಕ್ಕಾಗಿ ರಸ್ತೆಯಲ್ಲಿ ಹೋಗುವವರನ್ನು ಕರೆದಿದ್ದಾರೆ. ಪಕ್ಕದ ಫ್ಲ್ಯಾಟ್ ನಲ್ಲಿ ವಾಸವಾಗಿರುವ ಪುತ್ತಬ್ಬ ಎಂಬವರ ಪತ್ನಿ ,ಸೊಸೆ ಹೊಗೆ ಮತ್ತು ಬೆಂಕಿ ಕಂಡು ತೊಟ್ಟಿಲಲ್ಲಿದ್ದ ಮಗುವನ್ನು ಎತ್ತಿಕೊಂಡು ಕೆಳಗೆ ಓಡಿ ಬಂದಿದ್ದಾರೆ. ನಂತರ ಬೆಂಕಿಯ ತೀವ್ರತೆ ಹೆಚ್ಚಾಗಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು ಉದಯ ಕೋಟ್ಯಾನ್ ಮನೆಯ ಗೋಡೆ ಹಾಗೂ ಬಾಗಿಲು ಸಂಪೂರ್ಣ ನುಚ್ಚು ನೂರಾಗಿದೆ.

ಸಿಲಿಂಡರ್ ಸ್ಫೋಟದ ರಭಸಕ್ಕೆ ಪಕ್ಕದ ಯಾರೂ ಇಲ್ಲದ ಫ್ಲ್ಯಾಟ್ ಬಾಗಿಲು ಒಡೆದು ಒಳಗಿರುವ ಪೀಠೋಪಕರಣಗಳು , ಬಟ್ಟೆಬರೆ, ಕಪಾಟು, ಕಿಚನ್ ನಲ್ಲಿರುವ ವಸ್ತುಗಳು ಹಾಗೂ ರೂಂನಲ್ಲಿರುವ ವಸ್ತುಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ.

ಪುತ್ತಬ್ಬ ಅವರ ಮನೆಯ ಕಿಟಕಿ ಗಾಜುಗಳು ಹುಡಿಯಾಗಿದ್ದು, ಕಬ್ಬಿಣ ಹಾಗೂ ಅಲ್ಯೂಮಿನಿಯಂ ರಾಡ್ ಹಾಗೂ ಪಟ್ಟಿಗಳು ರಸ್ತೆಗೆಸೆಯಲ್ಪಟ್ಟಿವೆ. ಇತರ ಫ್ಲ್ಯಾಟ್ ಗಳ ಬಾಗಿಲು,ಕಿಟಕಿ ಹಾಗೂ ಇನ್ನಿತರ ವಸ್ತುಗಳಿಗೆ ಹಾನಿಯಾಗಿದೆ.

ಫ್ಲ್ಯಾಟ್ ನಲ್ಲಿರುವವರ ಸಮಯ ಪ್ರಜ್ಞೆಯಿಂದ ಪ್ರಾಣಹಾನಿ ಸಂಭವಿಸಿಲ್ಲವಾದರೂ ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕೂಡಲೇ ಕಾರ್ಯ ಪ್ರವೃತರಾಗಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಕಳ ಡಿವೈಎಸ್ಪಿ ಯವರ ನೇತೃತ್ವದಲ್ಲಿ ಕಾರ್ಕಳ ಪಿಎಸ್ಐ ಸಂದೀಪ್ ಶೆಟ್ಟಿ ಹಾಗೂ ಸುಬ್ರಹ್ಮಣ್ಯರವರು ಹೆಚ್ಚಿನ ಅನಾಹುತ ನಡೆಯದಂತೆ ಕ್ರಮ ಕೈಗೊಂಡಿದ್ದು ವಿದ್ಯುತ್ ವಯರ್ ಗಳಲ್ಲಿ ವಿದ್ಯುತ್ ಸೋರಿಕೆ ಹಾಗೂ ಹೊಗೆ ತುಂಬಿಕೊಂಡಿರುವುದರಿಂದ ಸಾರ್ವಜನಿಕರಿಗೆ ಫ್ಲ್ಯಾಟ್ ಒಳಗೆ ಪ್ರವೇಶ ನಿರ್ಬಂಧಿಸಿ ಸ್ಫೋಟದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!