2 ದಿನ ಕಾರವಾರ – ಬೆಂಗಳೂರು ನಡುವಿನ ಎಲ್ಲಾ ರೈಲುಗಳು ರದ್ದು
ಉಡುಪಿ, ಜು.26: ಶುಕ್ರವಾರ ಸಂಜೆ ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಎಡಕುಮರಿ ಹಾಗೂ ಕಡಗರವಳ್ಳಿ ನಡುವೆ ಪಶ್ಚಿಮ ಘಟ್ಟದ ಗುಡ್ಡ ಕುಸಿತದಿಂದಾಗಿ ಶನಿವಾರ ಹಾಗೂ ರವಿವಾರದಂದು ಕೊಂಕಣ ರೈಲು ಮಾರ್ಗದಲ್ಲಿ ಕಾರವಾರ ಹಾಗೂ ಬೆಂಗಳೂರು ನಡುವೆ ಸಂಚರಿಸುವ ಎಲ್ಲಾ ರೈಲುಗಳನ್ನು ರದ್ದು ಪಡಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ರೈಲು ನಂ.16585 ಸರ್ ಎಂ.ವಿಶ್ವೇಶ್ವರಯ್ಯ ಬೆಂಗಳೂರು ಹಾಗೂ ಮುರ್ಡೇಶ್ವರ ನಡುವಿನ ಎಕ್ಸ್ಪ್ರೆಸ್ ರೈಲಿನ ಸಂಚಾರ ವನ್ನು ಶನಿವಾರ ಹಾಗೂ ರವಿವಾರ (ಜು.27- )28) ಸಂಪೂರ್ಣ ರದ್ದುಪಡಿಸಲಾಗಿದೆ. ಅದೇ ರೀತಿ ಮುರ್ಡೇಶ್ವರ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಬೆಂಗಳೂರು ನಡುವಿನ ರೈಲು ನಂ.16586 ಎಕ್ಸ್ಪ್ರೆಸ್ ರೈಲಿನ ಸಂಚಾರವನ್ನು 28 ರವಿವಾರ ಹಾಗೂ 29 ಸೋಮವಾರ ಸಂಪೂರ್ಣವಾಗಿ ರದ್ದು ಪಡಿಸಲಾಗಿದೆ.
ಜು.28ರ ರವಿವಾರ ಪ್ರಾರಂಭಗೊಳ್ಳಬೇಕಿದ್ದ ರೈಲು ನಂ.06567 ಸರ್ ಎಂ.ವಿಶ್ವೇಶ್ವರಯ್ಯ ಬೆಂಗಳೂರು ಹಾಗೂ ಕಾರವಾರ ನಡುವಿನ ಸಂಚಾರವನ್ನು ರದ್ದು ಪಡಿಸಿದ್ದರೆ, ಅದೇ ದಿನದ ರೈಲು ನಂ.06568 ಕಾರವಾರ-ಸರ್ ಎಂ. ವಿಶ್ವೇಶ್ವರಯ್ಯ ಬೆಂಗಳೂರು ಎಕ್ಸ್ಪ್ರೆಸ್ ರೈಲಿನ ಸಂಚಾರವೂ ರದ್ದುಗೊಂಡಿದೆ.
ರೈಲು ನಂ.16595 ಕೆಎಸ್‌ಆರ್ ಬೆಂಗಳೂರು-ಕಾರವಾರ ಎಕ್ಸ್ಪ್ರೆಸ್ ರೈಲಿನ ಜು.27 ಶನಿವಾರ ಹಾಗೂ ಜು.28 ರವಿವಾರದ ಸಂಚಾರ ರದ್ದು ಗೊಂಡಿದೆ. ಹಾಗೆಯೇ ರೈಲು ನಂ.16596 ಕಾರವಾರ- ಕೆಎಸ್‌ಆರ್ ಬೆಂಗಳೂರು ಎಕ್ಸ್ಪ್ರೆಸ್ ರೈಲಿನ ಜು.27 ಮತ್ತು ಜು.28ರ ಸಂಚಾರವೂ ಸಂಪೂರ್ಣ ರದ್ದಾಗಿದೆ.
ಬದಲಿ ಮಾರ್ಗದಲ್ಲಿ ಸಂಚಾರ: ಕಾರವಾರ, ಸುರತ್ಕಲ್, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ ಮಾರ್ಗದಲ್ಲಿ ಕೆಎಸ್‌ಆರ್ ಬೆಂಗಳೂರಿಗೆ ತೆರಳಬೇಕಿದ್ದ ರೈಲು ನಂ.16596ರ ಇಂದು (ಜು.27) ಮಾರ್ಗ ಬದಲಿಸಿ ಕಾರವಾರ, ಸುರತ್ಕಲ್,ಮಂಗಳೂರು ಜಂಕ್ಷನ್, ಶೋರನೂರು, ಪಾಲಕ್ಕಾಡ್, ಪೊಡ್ನೂರು, ಈರೋಡ್ ಜಂಕ್ಷನ್, ಸೇಲಂ ಜಂಕ್ಷನ್ ಮೂಲಕ ಜೋಲಾರ್‌ಪೇಟೈಗೆ ತೆರಳಿದೆ.
ಇಂದು (ಜು.27) ಪ್ರಯಾಣ ಬೆಳೆಸಿರುವ ರೈಲು ನಂ. 16586 ಮುರ್ಡೇಶ್ವರ- ಸರ್ ಎಂ.ವಿಶ್ವೇಶ್ವರಯ್ಯ ಬೆಂಗಳೂರು ಎಕ್ಸ್ಪ್ರೆಸ್ ರೈಲು ತನ್ನ ಮಾಮೂಲಿ ಮಾರ್ಗ ಬದಲಿಸಿ ಮಂಗಳೂರು ಜಂಕ್ಷನ್‌ನಿಂದ ಶೋರನೂರು, ಪಾಲಕ್ಕಾಡ್, ಪೊಡ್ನೂರು, ಈರೋಡ್, ಸೇಲಂ ಜಂಕ್ಷನ್ ಹಾಗೂ ಜೋಲಾರ್‌ಪೇಟೈಗೆ ತೆರಳಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.