ಶಿಕ್ಷಕ, ಉದ್ಯಮಿ, ಸಾಮಾಜಿಕ ಧುರೀಣ ಬೆಂಜಮಿನ್ ಡಿ’ಸೊಜಾ ನಿಧನ

ಮಂಗಳೂರು: ಶಿಕ್ಷಣ, ಉದ್ಯಮ ಮತ್ತು ಸಮಾಜಸೇವೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಕೆಲರಾಯ್‌ನ ಬೆಂಜಮಿನ್ ಡಿ ಸೊಜಾ (75) ಇವರು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ದಿ। ಜೊನ್ ಮತ್ತು ದಿ।ಪಿಯಾದ್  ಡಿಸೊಜಾ ದಂಪತಿಯ ಹನ್ನೆರಡು ಮಕ್ಕಳಲ್ಲಿ ಕೊನೆಯವರಾದ ಬೆಂಜಮಿನ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೆಲರಾಯ್  ಸಂತ ಜೋಕಿಮ್ ಶಾಲೆಯಲ್ಲಿ ಪೂರೈಸಿ,  ಫ್ರೌಡಶಾಲೆಯಿಂದ ಪದವಿಯ ವರೆಗೆ ಮಂಗಳೂರಿನ ಸಂತ ಅಲೋಶಿಯಸ್ ಸಂಸ್ಥೆಯಲ್ಲಿ ಕಲಿತು, ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಶಿಕ್ಷಣ ಪದವಿ ಹಾಗೂ ತಿರುಪತಿಯ ವೆಂಕಟೇಶ್ವರ ವಿಶ್ವವಿದ್ಯಾಲಯದಿಂದ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು  ಪಡೆದು ಮಂಗಳೂರು, ಪುತ್ತೂರು ಮತ್ತು ಉಡುಪಿಯ ಕಲ್ಯಾಣ್ಪುರದ ಶಾಲೆಗಳಲ್ಲಿ  ಶಿಕ್ಷಕರಾಗಿ ದೀರ್ಘ ಕಾಲ  ಸೇವೆ ಸಲ್ಲಿಸಿದರು.

ಶಿಕ್ಷಣ ಕ್ಷೇತ್ರದಿಂದ ಉದ್ಯಮ ರಂಗಕ್ಕೆ ಪಾದಾರ್ಪಣೆ ಮಾಡಿ ವಿವಿಧ ಉದ್ಯಮಗಳಲ್ಲಿ ತೊಡಗಿಸಿಕೊಳ್ಳುವು ದರ ಜೊತೆಗೆ ದಕ್ಷಿಣ ಕನ್ನಡ ಜಿಲ್ಲಾ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಅತ್ಯುತ್ತಮ ಸಮಾಜ ಸೇವಕ ಪುರಸ್ಕಾರವನ್ನು ಪಡೆದುಕೊಂಡ ಬೆಂಜಮಿನ್ ಡಿಸೊಜಾ ಬಸ್ಸು ಮಾಲಕರ ಸಂಘದ ಕಾರ್ಯದರ್ಶಿಯಾಗಿ, ಭೂ ನ್ಯಾಯ ಮಂಡಲಿಯ ಸದಸ್ಯರಾಗಿ, ಬಜ್ಪೆ ಮಂಡಲ ಪಂಚಾಯತಿಯ ಪ್ರಧಾನ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಮಂಗಳೂರು ಧರ್ಮಪ್ರಾಂತ್ಯದ ಪಾಲನ ಪರಿಷತ್ತಿನಲ್ಲಿ ಮೂರು ಅವಧಿಗೆ ಸದಸ್ಯರಾಗಿ, ಕಥೊಲಿಕ ಸಭಾ ಸಂಘಟನೆಯ ಪ್ರಥಮ ಅಜೀವ ಸದಸ್ಯರಾಗಿ, ಧರ್ಮಕ್ಷೇತ್ರದಲ್ಲಿ ಗುರಿಕಾರ, ಪಾಲನ ಪರಿಷತ್ ಉಪಾಧ್ಯಕ್ಷ,  ಉತ್ತಮ ಕಾರ್ಯಕ್ರಮ ನಿರ್ವಾಹಕರಾಗಿ ಗಣನೀಯ ಸೇವೆ ಸಲ್ಲಿಸಿದ್ದು, ಓರ್ವ ಗಾಯಕ ಮತ್ತು ಕ್ರೀಡಾಪಟುವಾಗಿಯೂ ಗುರುತಿಸಿಕೊಂಡಿದ್ದರು.      

ಅವರು ಸುರತ್ಕಲ್ ಗೋವಿಂದಾಸ ಕಾಲೇಜಿನ ವಿಶ್ರಾಂತ ಸಹಾಯಕ ಪ್ರಾಧ್ಯಾಪಕಿ ವಾಯ್ಲೆಟ್ ಡಿ ಸೊಜಾ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!