“ಸ್ಟೂಡೆಂಟ್ಸ್ ವೆಡ್ನೆಸ್‌ಡೇ ನೈಟ್” ಪಾರ್ಟಿ- ಪಬ್ ಮಾಲೀಕನ ವಿರುದ್ಧ ಪ್ರಕರಣ ದಾಖಲು!
ಮಂಗಳೂರು: ವಿದ್ಯಾರ್ಥಿಗಳಿಗೆ ನೈಟ್ ಪಾರ್ಟಿ ಆಯೋಜನೆ ಮಾಡಿದ ಆರೋಪದ ಮೇರೆಗೆ ಮಂಗಳೂರಿನ ಪಬ್ ವಿರುದ್ಧ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಗಳೂರು ನಗರದ ದೇರೆಬೈಲ್ ಕೊಂಚಾಡಿಯ ಬಾರ್ ಮತ್ತು ಪಬ್ ಒಂದರಲ್ಲಿ ‘ಸ್ಟೂಡೆಂಟ್ಸ್ ವೆಡ್ನೆಸ್ ಡೇ ನೈಟ್’ ಎಂಬ ಕಾರ್ಯಕ್ರಮವನ್ನು ಆಯೋಜಿಸಿ ವಿದ್ಯಾರ್ಥಿಗಳನ್ನು ಮುಕ್ತವಾಗಿ ಆಹ್ವಾನಿಸಿದ್ದಾರೆ. ರಾತ್ರಿ 7 ಗಂಟೆಯಿಂದ ಮಧ್ಯರಾತ್ರಿ ವರೆಗೆ ಈ ಕಾರ್ಯಕ್ರಮವನ್ನು ಆಯೋಜಿಸಲು ಸಮಯ ನಿಗದಿಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಆಹಾರ, ಮದ್ಯ, ಮ್ಯೂಸಿಕ್, ಮನೋರಂಜನಾ ಕಾರ್ಯಕ್ರಮಗಳಿರುವುದಾಗಿ ಪ್ರಚಾರ ಮಾಡಲಾಗಿತ್ತು. ಇಷ್ಟು ಮಾತ್ರವಲ್ಲದೆ ವಿದ್ಯಾರ್ಥಿಗಳು ಗುರುತಿನ ಕಾರ್ಡ್ ತೋರಿಸಿದರೆ ಬಿಲ್‌ನಲ್ಲಿ ಶೇ.15ರಷ್ಟು ಕಡಿತದ ಆಫರ್ ನೀಡಲಾಗಿತ್ತು. ಈ ಇವೆಂಟ್‌ಗೆ ವಿದ್ಯಾರ್ಥಿನಿಯರು ಬಂದರೆ ಅವರಿಗೆ ಫ್ರೀ ಶೂಟರ್ಸ್ (ಸ್ಪೆಷಲ್ ಆಫರ್) ನೀಡುವ ಭರವಸೆಯನ್ನು ನೀಡಲಾಗಿತ್ತು.
ಇದೀಗ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಮಂಗಳೂರು ಪೊಲೀಸರು ಕಾರ್ಯಕ್ರಮ ಆಯೋಜನೆ ಮಾಡಿದ್ದ ಪಬ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಅಬಕಾರಿ ಇಲಾಖೆ ಅಧಿಕಾರಿಗಳ ಮತ್ತು ಮಂಗಳೂರು ಪೊಲೀಸ್ ಅಧಿಕಾರಿಗಳು ಇದೀಗ ಪಬ್ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು ಮಾಹಿತಿ ನೀಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾದ ಮಂಗಳೂರಿನ ದೇರೆಬೈಲ್‌ನಲ್ಲಿರುವ ಹೋಟೆಲ್ ಲಾಲ್‌ಬಾಗ್ ಇನ್ (ಲಿಕ್ಕರ್ ಲಾಂಜ್ ಬಾರ್) ಪಬ್‌ನ ಪ್ರಚಾರದ ಪೋಸ್ಟರ್ ಆಧಾರದ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ.
ಇಲಾಖೆಗೆ ಈ ಸಂಬಂಧ ಸಾಕಷ್ಟು ಕರೆಗಳು ಬಂದಿದ್ದು, ಪಬ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಬಳಿಕ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಸೂಚಿಸಲಾಗಿದೆ. ಅಲ್ಲದೆ ಇದಕ್ಕೆ ಕಾರಣರಾದವರ ವಿರುದ್ಧ ಅಬಕಾರಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಮಾಲೀಕರಿಗೆ ನೋಟಿಸ್
ವಿದ್ಯಾರ್ಥಿಗಳಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ ಬಾರ್‌ನ ಮಾಲೀಕರಿಗೆ ಕಾವೂರು ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಇದು ಮಾತ್ರವಲ್ಲದೆ ಜಿಲ್ಲಾ ನ್ಯಾಯಾಲಯದ ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್(ಎಪಿಪಿ)ಗೆ ಪತ್ರ ಬರೆದು ಈ ಘಟನೆಗೆ ಯಾವ ಸೆಕ್ಷನ್‌ನಡಿ ಪ್ರಕರಣ ದಾಖಲಿಸಬಹುದೆಂದು ಪೊಲೀಸರು ಸಲಹೆ ಕೇಳಿದ್ದಾರೆಂದು ತಿಳಿದು ಬಂದಿದೆ.
ಎಪಿಪಿ ಪ್ರತಿಕ್ರಿಯೆ ಬಳಿಕ ಸೂಕ್ತ ಕ್ರಮ
ವಿದ್ಯಾರ್ಥಿಗಳನ್ನು ಬಾರ್‌ಗೆ ಆಹ್ವಾನಿಸಿ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ಹಾಕಿದ್ದಕ್ಕಾಗಿ ಅಬಕಾರಿ ಇಲಾಖೆ ಈಗಾಗಲೇ 7ಸಾವಿರ ರೂ. ದಂಡ ವಿಧಿಸಿದೆ. ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಜಿಲ್ಲಾನ್ಯಾಯಾಲಯದ ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ಪತ್ರ ಬರೆದಿದ್ದು, ಈ ಘಟನೆಗೆ ಯಾವ ಸೆಕ್ಷನ್‌ನಡಿ ಪ್ರಕರಣ ದಾಖಲಿಸ ಬಹುದೆಂದು ಮಾಹಿತಿ ಕೇಳಿದ್ದೇವೆ. ಅವರ ಉತ್ತರ ಬಂದ ಕೂಡಲೇ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಕಾರ್ಯಕ್ರಮದ ಬಗ್ಗೆ ಜಾಹೀರಾತು ಪ್ರಚಾರ ಮಾಡಿದ್ದಾರೆ, ಆದರೆ ಕಾರ್ಯಕ್ರಮ ರದ್ದಾಗಿದೆ. ಹೀಗಿರುವಾಗ ಯಾವ ಸೆಕ್ಷನ್‌ನಡಿ ಪ್ರಕರಣ ದಾಖಲಿಸುವುದು ಎಂಬ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದೇವೆ. ಪಬ್ಲಿಕ್ ಪ್ರಾಸಿಕ್ಯೂಟರ್ ನಿರ್ದೇಶನ ಮೇಲೆ ಕ್ರಮಕೈಗೊಳ್ಳಲಾಗುವುದು, ಕಾನೂನಿನಲ್ಲಿ ಅವಕಾಶವಿದ್ದರೆ ಪರವಾನಗಿ ರದ್ದು ಮಾಡಲು ಪತ್ರ ಬರೆಯಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.
ಪಬ್ ವಿರುದ್ಧ ಅಬಕಾರಿ ಕಾಯ್ದೆ 1965 ರ ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.