ಸಮುದ್ರದಲ್ಲಿ ಕಾರ್ಗೋ ಶಿಪ್‌ಗೆ ಬೆಂಕಿ- ಮುಳುಗುವ ಭೀತಿಯಲ್ಲಿ ಬೃಹತ್ ಹಡಗು!
ಉಡುಪಿ: ಗುಜರಾತ್‌ನ ಮುಂದ್ರಾ ಬಂದರಿನಿಂದ ಶ್ರೀಲಂಕಾದ ಕೊಲಂಬೊಗೆ ದಹನಕಾರಿ ಸರಕನ್ನು ಸಾಗಿಸುತಿದ್ದ ಬೃಹತ್ ಸರಕು ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅದೀಗ ಸುರತ್ಕಲ್ ಸಮೀಪ ಲಂಗರು ಹಾಕಿದ್ದು, ಅದರಿಂದ ತೈಲ ಸೋರಿಕೆಯಾಗಿ ಸಮುದ್ರ ತೀರದಲ್ಲಿ ಮಾಲಿನ್ಯ ಉಂಟಾಗುವ ಬಗ್ಗೆ ಎಚ್ಚರಿಕೆ ವಹಿಸುವಂತೆ ಹಾಗೂ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಿರುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ಅವರು ವಿವಿಧ ಇಲಾಖೆಗಳಿಗೆ ಸೂಚನೆ ನೀಡಿದ್ದಾರೆ.
ಈ ಕುರಿತು ಕರಾವಳಿ ಕಾವಲು ಪಡೆಯ ಪೊಲೀಸ್ ಅಧೀಕ್ಷಕರು, ಕರಾವಳಿ ನಿಯಂತ್ರಣ ವಲಯದ ಪ್ರಾದೇಶಿಕ ನಿರ್ದೇಶಕರು, ಜಿಲ್ಲೆಯ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಹಾಗೂ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯಪಾಲಕ ಅಭಿಯಂತರಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಸೂಚನೆಗಳನ್ನು ನೀಡಿದ್ದಾರೆ.
ಅರಬಿ ಸಮುದ್ರದಲ್ಲಿ ಸಾಗುತಿದ್ದ ಎಂವಿಎಂ ಫ್ರಾಂಕ್‌ಫರ್ಟ್ ಕಾರ್ಗೋ ಕಂಟೈನರ್ ಹಡಗಿನಲ್ಲಿ ಜು.19ರಂದು ಗೋವಾ ಹಾಗೂ ಕಾರವಾರದ ನಡುವೆ ಬೆಂಕಿ ಕಾಣಿಸಿಕೊಂಡಿದ್ದು, ಹಲವು ದಿನಗಳ ಪ್ರಯತ್ನದ ಬಳಿಕ ಭಾರತೀಯ ಕೋಸ್ಟ್ ಗಾರ್ಡ್ ತಂಡ ಅಗ್ನಿಶಮನ ಮಾಡುವಲ್ಲಿ ಯಶಸ್ವಿಯಾಗಿದೆ. ಪ್ರಸ್ತುತ ಈ ಹಡಗು ಮಂಗಳೂರು ಸಮೀಪದ ಸುರತ್ಕಲ್‌ನಿಂದ 33 ನಾಟಿಕಲ್ ಮೈಲು ದೂರದಲ್ಲಿ ಲಂಗರು ಹಾಕಿದೆ.
ಕಾರ್ಗೋ ಕಂಟೈನರ್‌ನಲ್ಲಿ ಅಂತಾರಾಷ್ಟ್ರೀಯ ಕಡಲ ಅಪಾಯಕಾರಿ ಸರಕು (ಐಎಂಡಿಜಿ) ಕೆಟಗರಿ-4ರ ದಹನಕಾರಿ ಘನ ಹಾಗೂ ಅಲ್ಪ ಪ್ರಮಾಣದಲ್ಲಿ ದ್ರವ ವಸ್ತುಗಳು ಇರುವುದರಿಂದ ಸರಕು ಹಡಗು ಬೆಂಕಿಗೆ ಸುಟ್ಟು ಹೋದಲ್ಲಿ ಅಥವಾ ಸಮುದ್ರದಲ್ಲಿ ಮುಳುಗಿ ಅದರಲ್ಲಿರುವ ಅಪಾಯಕಾರಿ ವಸ್ತುಗಳು ಸೋರಿಕೆಯಾದಲ್ಲಿ ಸಮುದ್ರ ಮಾಲಿನ್ಯ ಉಂಟಾಗಿ, ಇವುಗಳು ಸಮುದ್ರ ತೀರದಲ್ಲಿರುವ ಮರಳಿನಲ್ಲಿ ಶೇಖರಣೆಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಲಿಖಿತ ಸೂಚನೆಯಲ್ಲಿ ತಿಳಿಸಿದ್ದಾರೆ.
ಈ ವಸ್ತುಗಳನ್ನು ಅಗತ್ಯ ಮುನ್ನೆಚ್ಚರಿಕೆಯೊಂದಿಗೆ ಮಾನವ ಶ್ರಮದ ಮೂಲಕ ಶೇಖರಿಸಲು ಸಾಧ್ಯವಿದೆ ಎಂದು ಭಾರತೀಯ ಕೋಸ್ಟ್ ಗಾರ್ಡ್‌ನ ಅಧಿಕಾರಿಗಳು ವಿಡಿಯೋ ಸಂವಾದದ ವೇಳೆ ತಿಳಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಪ್ರಸ್ತುತ ರಾಜ್ಯದ ಕರಾವಳಿ ಪ್ರದೇಶಗಳು ಭಾರೀ ಮಳೆ ಹಾಗೂ ವಿವಿಧ ತೀವ್ರತೆಯ ನೈಸರ್ಗಿಕ ವಿಕೋಪಗಳ ನ್ನು ಎದುರಿಸುತ್ತಿವೆ. ಇಂಥ ಸಂದರ್ಭದಲ್ಲಿ ಮತ್ತೊಂದು ಅವಘಡ ಸಂಭವಿಸಿದ್ದು, ರಾಜ್ಯ ಸರಕಾರ ಹಾಗೂ ಮೂರು ಜಿಲ್ಲಾಡಳಿತ ಗಳು ಎಲ್ಲಾ ರೀತಿಯ ಬೆಂಬಲ ನೀಡಲು ಸಿದ್ಧವಾಗಿದ್ದರೂ, ರಾಜ್ಯ ಕರಾವಳಿಯ ಸೂಕ್ಷ್ಮ ಪರಿಸರ ವ್ಯವಸ್ಥೆ ಮೇಲೆ ತೈಲ ಸೋರಿಕೆ ಘಟನೆ ಸಂಭವಿಸಿದರೆ, ಅದು ಸ್ಥಳೀಯ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಹಾಗೂ ಸ್ಥಳೀಯ ಸಾರ್ವಜನಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಬಹುದು ಎಂದವರು ಎಚ್ಚರಿಸಿದ್ದಾರೆ.
ಹೀಗಾಗಿ ಯಾವುದೇ ರೀತಿಯ ತೈಲ ಸೋರಿಕೆ/ಮಾಲಿನ್ಯದಿಂದ ಕರ್ನಾಟಕ ಕರಾವಳಿಯನ್ನು ರಕ್ಷಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ದುರಂತ ಸಂಭವಿಸಿದಲ್ಲಿ ಸಾಕಷ್ಟು ಮಾನವ ಸಂಪನ್ಮೂಲಗ ಳೊಂದಿಗೆ ಪೂರ್ವ ತಯಾರಿ ಮಾಡಿ ಕೊಳ್ಳುವ ಅಗತ್ಯವಿದೆ. ಆದುದರಿಂದ ತುರ್ತು ಸಂದರ್ಭದಲ್ಲಿ ತಂಡಗಳನ್ನು ಉಡುಪಿ ಜಿಲ್ಲೆಯ ಸಮುದ್ರ ತೀರ ಪ್ರದೇಶ ದುದ್ದಕ್ಕೂ ಅಗತ್ಯ ಸಲಕರಣೆಗಳೊಂದಿಗೆ ಸನ್ನದ್ಧ ಸ್ಥಿತಿಯಲ್ಲಿರುವಂತೆ ಇಲಾಖೆಗಳ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಸೂಚನೆಗಳನ್ನು ನೀಡಿದ್ದಾರೆ.