ಕೊರಗ ಸಮುದಾಯ ಹಾಗೂ ಟ್ಯಾಕ್ಸಿ ಅಸೋಸಿಯೇಶನ್ ಬೇಡಿಕೆ: ಸ್ಪೀಕರ್ ಭೇಟಿಯಾದ ಶಾಸಕ ಯಶ್ಪಾಲ್ ಸುವರ್ಣ
ಉಡುಪಿ: ಜಿಲ್ಲೆಯ ಕೊರಗ ಸಮುದಾಯದ ಸಂಘಟನೆಗಳು ತಮ್ಮ ನ್ಯಾಯಸಮ್ಮತ ಬೇಡಿಕೆಗಳಾದ ಭೂಮಿ ಹಕ್ಕು, ವಿದ್ಯಾವಂತ ನಿರುದ್ಯೋಗಿ ಯುವ ಜನತೆಗೆ ಅರ್ಹ ಉದ್ಯೋಗ ಹಾಗೂ ಪರಿಶಿಷ್ಟ ಪಂಗಡದ ವಿವಿಧ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ವಿಧಾನಸಭೆ ಸ್ಪೀಕರ್ ಯು. ಟಿ. ಖಾದರ್ ರವರನ್ನು ಭೇಟಿಯಾಗಿ ಕೊರಗ ಸಮುದಾಯದ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರ ತಕ್ಷಣ ಸ್ಪಂದಿಸುವಂತೆ ಸೂಚನೆ ನೀಡುವಂತೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮನವಿ ಮಾಡಿದರು.
ಈಗಾಗಲೇ ರಾಜ್ಯ ಸರ್ಕಾರ ಪ್ರವಾಸಿ ವಾಹನಗಳಿಗೆ ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ಕಡ್ಡಾಯ ಅಳವಡಿಕೆಗೆ ನೀಡಿರುವ ಕಾಲಾವಕಾಶ ವಿಸ್ತರಣೆ ಸಹಿತ ವಿವಿಧ ಸಮಸ್ಯೆ ಹಾಗೂ ಟ್ಯಾಕ್ಸಿ ಅಸೋಸಿಯೇಶನ್ ಬೇಡಿಕೆಗಳ ಬಗ್ಗೆ ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿದರು.
ಕೊರಗ ಸಮುದಾಯ ಹಾಗೂ ಟ್ಯಾಕ್ಸಿ ಅಸೋಸಿಯೇಶನ್ ಬೇಡಿಕೆಗಳ ಬಗ್ಗೆ ಸದನದಲ್ಲಿ ಶೂನ್ಯ ವೇಳೆಯಲ್ಲಿ ಚರ್ಚಿಸಿ ಸರ್ಕಾರದ ಗಮನ ಸೆಳೆಯಲು ಅವಕಾಶ ನೀಡುವಂತೆ ಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿದರು.