ಉಡುಪಿ: ಪ್ರವಾಸಿ ವಾಹನಗಳಿಗೆ ಜಿಪಿಎಸ್, ಪ್ಯಾನಿಕ್ ಬಟನ್ ಕಡ್ಡಾಯ ಅಳವಡಿಕೆ ವಿರೋಧಿಸಿ ಪ್ರತಿಭಟನೆ
ವೈಟ್‌ಬೋರ್ಡ್‌ನಲ್ಲಿ ಬಾಡಿಗೆ ಮಾಡುವವರಿಗೆ ಸರಕಾರ ಕಡಿವಾಣ ಹಾಕಬೇಕು: ರಘುಪತಿ ಭಟ್ ಆಗ್ರಹ
ಉಡುಪಿ: ಪ್ರವಾಸಿ ವಾಹನಗಳಿಗೆ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಕಡ್ಡಾಯ ಅಳವಡಿಕೆ ವಿರೋಧಿಸಿ ಜಿಲ್ಲಾ ಟ್ಯಾಕ್ಸಿಮನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಟ್ಯಾಕ್ಸಿಮನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ಅಧ್ಯಕ್ಷ ಕೆ.ರಘುಪತಿ ಭಟ್ ಮಾತನಾಡಿ, ಹಳೆ ವಾಹನಗಳಿಗೆ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸುವ ಸ್ಥಿತಿಯಲ್ಲಿ ಚಾಲಕರು-ಮಾಲಕರು ಇಲ್ಲ. ಈಗಾಗಲೇ ಟ್ಯಾಕ್ಸಿ ಚಾಲಕ-ಮಾಲಕರು ಹಲವಾರು ತೆರಿಗೆಗಳನ್ನು ಪಾವತಿಸಿ ನಷ್ಟದಲ್ಲಿ ದಿನ ದೂಡುತ್ತಿದ್ದಾರೆ. ಹೊಸ ವಾಹನಗಳಿಗೆ ಅಳವಡಿಕೆ ಮಾಡುವ ನಿರ್ಧಾರವನ್ನು ಸರಕಾರ ಮಾಡಬೇಕು. ಸರಕಾರ ಮನಸ್ಸು ಮಾಡಿದರೆ ಈ ಸಮಸ್ಯೆಯನ್ನು ಸುಲಭದಲ್ಲಿ ಪರಿಹಾರ ಮಾಡಬಹುದು ಎಂದರು.
ವೈಟ್‌ಬೋರ್ಡ್‌ನಲ್ಲಿ ಬಾಡಿಗೆ ಮಾಡುವವರಿಗೆ ಸರಕಾರ ಕಡಿವಾಣ ಹಾಕಬೇಕು. ಸರಕಾರ ಇದನ್ನು ಗಮನಿಸಿ ಕಳ್ಳ ಉದ್ಯಮಗಳನ್ನು ನಿಲ್ಲಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಗಮನಹರಿಸಬೇಕು. ಸಾಧ್ಯವಿದ್ದರೆ ಖಾಸಗಿಯಾಗಿ ಬಾಡಿಗೆ ಮಾಡುವ ವಾಹನಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಿ. ಟ್ಯಾಕ್ಸಿಮನ್‌ಗಳ ಧ್ವನಿಯನ್ನು ರಾಜ್ಯ ಸರಕಾರ ಗಂಭೀರವಾಗಿ ತೆಗೆದುಕೊಂಡು ಇದಕ್ಕೆ ಪರಿಹಾರ ಒದಗಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಹಾಗೂ ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಲ್.ಪಿ.ನಾಯಕ್ ಅವರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ಟ್ಯಾಕ್ಸಿಮನ್ & ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ರಮೇಶ್ ಕೆ. ಕೋಟ್ಯಾನ್, ಕೆಟಿಡಿಓ ಅಧ್ಯಕ್ಷ ರಮೇಶ್ ಕುಂದಾಪುರ, ಉಪಾಧ್ಯಕ್ಷರಾದ ಮಂಜು ಪೂಜಾರಿ, ರಾಘವೇಂದ್ರ ಸೋಮಯಾಜಿ, ಜಯಕರ ಕುಂದರ್, ರವಿ ಶೆಟ್ಟಿ, ಸತೀಶ್ ನಾಯಕ್, ಕೋಶಾಧಿಕಾರಿ ಪ್ರಕಾಶ್ ಅಡಿಗ, ಜತೆ ಕೋಶಾಧಿಕಾರಿ ಕೃಷ್ಣ ಕೋಟ್ಯಾನ್, ಸಂಘಟನ ಕಾರ್ಯದರ್ಶಿಗಳಾದ ವಿಕ್ರಂ ರಾವ್, ಸತೀಶ್ ಶೆಟ್ಟಿ, ಮಹೇಶ್ ಕುಮಾರ್, ವಿನ್ಸಿ ಡಿ’ಸೋಜಾ ಮೊದಲಾದವರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.