ಉಡುಪಿ: ಆಸ್ಪತ್ರೆಗೆ ತೋಡಿದ್ದ ಅಪಾಯಕಾರಿ ಗುಂಡಿ ಮುಚ್ಚುವಂತೆ ಕ್ರೇನ್ ಮೂಲಕ ವಿನೂತ ಪ್ರತಿಭಟನೆ

ಉಡುಪಿ: ನಗರದಲ್ಲಿ ಉದ್ಯಮಿ ಬಿ.ಆರ್. ಶೆಟ್ಟಿ ಕಂಪೆನಿಯ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ಕಟ್ಟಡ ಕಾಮಗಾರಿಗೆ ತೆಗೆದಿರುವ ಬೃಹತ್ ಗುಂಡಿಯನ್ನು ಮುಚ್ಚುವಂತೆ ಆಗ್ರಹಿಸಿ ಸಮಾಜ ಸೇವಕ ನಿತ್ಯಾನಂದ ಒಳಕಾಡು ವಿನೂತನ ಪ್ರತಿಭಟನೆಯನ್ನು ನಡೆಸಿದರು.

ವಿನೂತನ ಪ್ರತಿಭಟನೆ ನಡೆಸಿದ ಸಾಮಾಜಿಕ ಕಾರ್ಯಕತರಾದ ನಿತ್ಯಾನಂದ ಒಳಕಾಡು ಅವರು ಕ್ರೇನ್ ನ ಬುಟ್ಟಿಯೊಳಗೆ ನಿಂತು ಎಚ್ಚರಿಕೆ ಫಲಕ ಇಟ್ಟುಕೊಂಡು ತಮಟೆಯನ್ನು ಹೊಡೆಯುತ್ತಾ, ಆಳೆತ್ತರ ಗುಂಡಿಗೆ ಸನಿಹಕ್ಕೆ ತೆರಳಿದ ನಿತ್ಯಾನಂದ ಒಳಕಾಡು ಎಚ್ಚರಿಕೆಯ ಫಲಕವನ್ನು ನೀರಿನಲ್ಲಿ ತೇಲಿಬಿಟ್ಟರು.

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ನಿತ್ಯಾನಂದ ಒಳಕಾಡು, ಬಿ.ಆರ್. ಶೆಟ್ಟಿ ಕಂಪೆನಿಯ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಿಸಲು ತೆಗೆದ ಬೃಹತ್ ಗುಂಡಿಯಲ್ಲಿ ಮಳೆ ನೀರು ತುಂಬಿ ಕೃತಕ ಈಜುಕೊಳ ಸೃಷ್ಟಿಯಾಗಿದೆ. ಇದರಿಂದ ಸುತ್ತಮುತ್ತಲಿನ ಪರಿಸರದಲ್ಲಿ ಆತಂಕ ಮತ್ತು ಬಹುಮಹಡಿ ಕಟ್ಟಡಗಳಿಗೆ ಅಪಾಯದ ಸ್ಥಿತಿ ಎದುರಾಗಿದೆ. ಅಲ್ಲದೆ ಈ ಗುಂಡಿಯೂ ಡೆಂಗ್ಯೂ ಕಾರ್ಖಾನೆಯಾಗಿ ಮಾರ್ಪಾಡಾಗಿದೆ. ತಕ್ಷಣ ಗುಂಡಿಯನ್ನು ಮುಚ್ಚಿ ಎಂದು ಆಗ್ರಹಿಸಿದರು.

ಹಿರಿಯ ಮನೋವೈದ್ಯ ಡಾ. ಪಿ.ವಿ. ಭಂಡಾರಿ ಮಾತನಾಡಿ, ಹಾಜಿ ಅಬ್ದುಲ್ ಸಾಹೇಬ್ ಅವರು ಸರಕಾರಕ್ಕೆ ಜಾಗವನ್ನು ದಾನ ನೀಡಿರುವುದು ಗುಂಡಿ ತೆಗೆಯಲು ಅಲ್ಲ. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇದನ್ನು ಖಾಸಗಿಯವರಿಗೆ ನೀಡಲಾಗಿತ್ತು. ಆದರೆ ಕಾರಣಾಂತರದಿಂದ ಜಾಗದಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯನ್ನು ನಿರ್ಮಿಸಿಲ್ಲ. ಕಳೆದ ಆರು ವರ್ಷದಿಂದ ನಿಷ್ಪ್ರಯೋಜಕವಾಗಿದೆ. ಆದರೆ ಈಗ ಈ ಜಾಗದ ಸರಕಾರದ ಅಧೀನದಲ್ಲಿ ಇದೆಯೋ, ಖಾಸಗಿಯವರ ಒಡೆತನದಲ್ಲಿ ಇದೆಯೋ ತಿಳಿದಿಲ್ಲ. ಜಿಲ್ಲಾಡಳಿತ, ಜಿಲ್ಲಾಧಿಕಾರಿಗಳು ತಕ್ಷಣ ಅಪಾಯಕಾರಿ ಗುಂಡಿಯನ್ನು ಪರಿಶೀಲಿಸಬೇಕು ತುರ್ತು ಕ್ರಮ ಕೈಗೊಳ್ಳಬೇಕು. ಇಲ್ಲಿ ಸೊಳ್ಳೆ ಉತ್ಪತ್ತಿಯಾಗಿ ನಾಗರಿಕರ ಆರೋಗ್ಯದ ಮೇಲೂ ತೊಂದರೆ ಆಗುತ್ತಿದೆ. ಇದನ್ನೆಲ್ಲ ನೋಡಿಕೊಂಡು ಸರಕಾರ ಸುಮ್ಮನೆ ಇರುವುದು ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದರು.

ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಕ್ರೇನ್ ನ ಮೂಲಕ ಪ್ರತಿಭಟನೆ ನಡೆಸುವಾಗ ಮುನ್ನೆಚ್ಚರಿಕಾ ಕ್ರಮವಾಗಿ ಈಜು ಪಟುಗಳು, ಅಗ್ನಿಶಾಮಕ ದಳ, ಪೋಲಿಸ್ ಇಲಾಖೆ, ಆ್ಯಂಬುಲೆನ್ಸ್ ಗಳನ್ನು ಸ್ಥಳದಲ್ಲಿ ಸಿದ್ದತೆ ಮಾಡಿ ಇಡಲಾಗಿತ್ತು.

Leave a Reply

Your email address will not be published. Required fields are marked *

error: Content is protected !!