ದೇಶದ ಸರ್ವಾಂಗೀಣ ಏಳಿಗೆಗೆ ಅಕ್ಷಯಪಾತ್ರೆ, ಮಧ್ಯಮ ವರ್ಗಕ್ಕೆ ಶಕ್ತಿ: ಬಜೆಟ್ ಕುರಿತು ಪ್ರಧಾನಿ ಮೋದಿ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿರುವ ಬಜೆಟ್ ದೇಶದ ಸರ್ವಾಂಗೀಣ ಏಳಿಗೆಗೆ ಅಕ್ಷಯಪಾತ್ರೆಯಾಗಿದ್ದು, ಮಧ್ಯಮ ವರ್ಗಕ್ಕೆ ಶಕ್ತಿ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬಜೆಟ್ ಮಂಡನೆ ಕುರಿತು ಟ್ವಿಟರ್ ನಲ್ಲಿ ವಿಡಿಯೋ ಸಂದೇಶ ನೀಡಿರುವ ಪ್ರಧಾನಿ ಮೋದಿ, ‘ದೇಶದ ಸರ್ವಾಂಗೀಣ ಏಳಿಗೆಗೆ ಈ ಬಜೆಟ್‌ ಏಣಿಯಾಗಿದ್ದು, ದೇಶದ ಎಲ್ಲ ವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್‌ ಮಂಡಿಸಲಾಗಿದೆ. ಯುವಕರಿಗೆ ಉದ್ಯೋಗ, ಬಡವರಿಗೆ ಮನೆ ನಿರ್ಮಾಣ, ಸಣ್ಣ ಉದ್ಯಮಗಳು, ಶಿಕ್ಷಣ ಸೇರಿ ಎಲ್ಲ ಕ್ಷೇತ್ರಗಳ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ಮಂಡಿಸಲಾಗಿದೆ.

ಅಷ್ಟೇ ಅಲ್ಲ, ಭಾರತವು ಮೂಲ ಸೌಕರ್ಯ ಉತ್ಪಾದಿಸುವಲ್ಲಿ ಜಾಗತಿಕ ಮಳಿಗೆಯಾಗುತ್ತದೆ. ಭಾರತದ ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ. ಅಷ್ಟರಮಟ್ಟಿಗೆ, ಪ್ರಸಕ್ತ ಸಾಲಿನ ಬಜೆಟ್ ದೇಶದ ಏಳಿಗೆಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ.

ಮಾತ್ರವಲ್ಲದೆ, ಶಿಕ್ಷಣ ಹಾಗೂ ಕೌಶಲ ವೃದ್ಧಿಯ ದೃಷ್ಟಿಯಿಂದಲೂ ಬಜೆಟ್‌ ಪ್ರಮುಖವಾಗಿದೆ. ಶಿಕ್ಷಣ ಹಾಗೂ ಕೌಶಲಾಭಿವೃದ್ಧಿಯಿಂದ ಮಧ್ಯಮ ವರ್ಗದ ಜನರಿಗೆ ಭಾರಿ ಅನುಕೂಲವಾಗಲಿದೆ ಎಂದಿರುವ ಪ್ರಧಾನಿ ಮೋದಿ, ಯುವಕರಿಗೆ ಹೊಸ ಶಕ್ತಿ ಸಿಗಲಿದೆ. ದಲಿತರು ಹಾಗೂ ಬುಡಕಟ್ಟು ಸಮುದಾಯದವರಿಗೂ ಇದರಿಂದ ನೆರವಾಗಲಿದೆ. ಹಣಕಾಸು ನೆರವು ಕೂಡ ಸಿಗುವುದರಿಂದ ದಮನಿತರು ಏಳಿಗೆಯ ಹಾದಿ ಹಿಡಿಯಲು ಸಾಧ್ಯವಾಗಲಿದೆ ಎಂದರು.

”ಕಳೆದ 10 ವರ್ಷದಲ್ಲಿ ದೇಶದ 25 ಕೋಟಿ ಬಡವರು ಬಡತನದಿಂದ ಮುಕ್ತರಾಗಿದ್ದಾರೆ. ನವೋದ್ಯಮಗಳಿಗೆ ಆದ್ಯತೆ ನೀಡಿರುವುದು, ಮಹಿಳೆಯರಿಗೂ ಉದ್ಯೋಗಾವಕಾಶ, ಸಣ್ಣ ಉದ್ಯಮಗಳಿಗೆ ಆರ್ಥಿಕ, ಸಾಲದ ನೆರವು ಸೇರಿ ಹತ್ತಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈಗ ಮಂಡಿಸಿರುವ ಬಜೆಟ್‌ನಿಂದ ಕೂಡ ಮಧ್ಯಮ ವರ್ಗದವರ ಅನುಕೂಲವಾಗಲಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!