ಉಡುಪಿ: ಮಕ್ಕಳ ಕಲ್ಯಾಣ ಸಮಿತಿಯಿಂದ ನ್ಯಾಯವಾದಿ ಅಖಿಲ್ ಹೆಗ್ಡೆ ವಜಾಗೊಳಿಸಲು ಆಗ್ರಹ

ಉಡುಪಿ, ಜು.22: ಉಡುಪಿ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಅಖಿಲ್ ಬಿ.ಹೆಗ್ಡೆ ಅವರು ಸಂತ್ರಸ್ಥ ಮಕ್ಕಳ ಪರವಾಗಿ ಹೋರಾಟ ನಡೆಸುವ ಬದಲು ಪೋಕ್ಸೋ ಪ್ರಕರಣದಲ್ಲಿ ಮಕ್ಕಳ ವಿರುದ್ಧವಾಗಿ ಆರೋಪಿಗಳ ಪರವಾಗಿ ವಕಾಲತ್ತು ನಡೆಸುತಿದ್ದಾರೆ. ಈ ಹಿನ್ನೆಲೆಯನ್ನು ಅವರನ್ನು ಕೂಡಲೇ ಸಮಿತಿಯಿಂದ ವಜಾಗೊಳಿಸಬೇಕು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನೇಶ್ ಗಾಣಿಗ ಅವರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಅಖಿಲ್ ಬಿ.ಹೆಗ್ಡೆ ಅವರು ಈವರೆಗೆ 20ಕ್ಕೂ ಹೆಚ್ಚು ಪೋಕ್ಸೊ ಪ್ರಕರಣಗಳಲ್ಲಿ ಆರೋಪಿಗಳ ಪರವಾಗಿ ವಕಾಲತ್ತು ನಡೆಸಿದ ದಾಖಲೆಗಳು ತಮ್ಮಲ್ಲಿದ್ದು, ಇದರಿಂದ ಸಂತ್ರಸ್ಥ ಮಕ್ಕಳಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು. ಈ ವಿಷಯವನ್ನು ತಾವು ಜಿಲ್ಲಾ ಕಾನೂನು ಪ್ರಾಧಿಕಾರದ ಗಮನಕ್ಕೆ ತಂದಿರುವುದಾಗಿ ಗಾಣಿಗ ತಿಳಿಸಿದರು.

ಒಂದು ವಾರದೊಳಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ಅಖಿಲ್ ಬಿ.ಹೆಗ್ಡೆ ಅವರನ್ನು ಅಮಾನತುಗೊಳಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ನಾವು ಧರಣಿ ಸತ್ಯಾಗ್ರಹ ಮಾಡುವಾಗಿ ಅವರು ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಕ್ಕಳ ಹಕ್ಕುಗಳ ಹೋರಾಟ ಕಾರ್ಯಕರ್ತೆ ತಿಲೋತ್ತಮೆ ನಾಯಕ್, ಸ್ಮಿತಾ ಸುಧೀರ್ ಉಪಸ್ಥಿತರಿದ್ದರು.

ಉಡುಪಿ: ನಾನೊಬ್ಬ ಕ್ರಿಮಿನಲ್ ಸೈಡ್ ಪ್ರಾಕ್ಟೀಸ್ ಮಾಡುತ್ತಿರುವ ವಕೀಲನಾಗಿದ್ದು, ನನ್ನ ವೃತ್ತಿಯನ್ನು ನಾನು ಮಾಡುತ್ತಿದ್ದೇನೆ. ಕೆಲವರು ನನ್ನ ಮೇಲೆ ಇಲ್ಲ ಸಲ್ಲದ ಆರೋಪವನ್ನು ಮಾಡಿ ತೇಜೋವಧೆ ಮಾಡುತ್ತಿದ್ದಾರೆ ಎಂದು ನ್ಯಾಯವಾದಿ ಅಖಿಲ್.ಬಿ.ಹೆಗ್ಡೆ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನೇಶ್ ಗಾಣಿಗ ಅವರು ಪತ್ರಿಕಾಗೋಷ್ಠಿ ನಡೆಸಿ ತನ್ನ ವಿರುದ್ದ ಮಾಡಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿದರು.

ದಿನೇಶ್ ಗಾಣಿಗ ಅವರ ಸ್ನೇಹಿತ ಪ್ರಶಾಂತ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನನ್ನ ತೇಜೋವಧೆಯನ್ನು ಮಾಡುತ್ತಿದ್ದಾರೆ. ಪ್ರಶಾಂತ್ ನ ಪತ್ನಿ ಚೈತ್ರಾ ವಕೀಲೆಯಾಗಿದ್ದು, ಆಕೆ, ಅವರ ಸಹೋದ್ಯೋಗಿ, ಆಕೆಯ ಮಾವ ಹಾಗು ಸಂಬಂಧಿಯೊಬ್ಬರ ಮೇಲೆ ಪ್ರಶಾಂತ್ ಪೋಕ್ಸೊ ಪ್ರಕರಣವನ್ನು ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

ಈ ಪ್ರಕರಣದಲ್ಲಿ ವಕೀಲರನ್ನು ನಾನು ಬೆಂಬಲಿಸಿದ್ದೇನೆ ಎಂಬ ಕಾರಣಕ್ಕೆ ನನ್ನ ಮೇಲೆ ಹಗೆ ಸಾಧಿಸುತ್ತಿದ್ದಾರೆ. ಈಗಾಗಲೇ ಪ್ರಶಾಂತ್ ನ ವಿರುದ್ದ ಪತ್ನಿಗೆ ಹಲ್ಲೆ, ವರದಕ್ಷಿಣೆ ಕಿರುಕುಳ ನೀಡಿದ ಪ್ರಕರಣಗಳಿವೆ. ನ್ಯಾಯಾಲಯದಲ್ಲಿಯೂ ಆತನ ವಿರುದ್ದ ಖಾಸಗಿ ಪ್ರಕರಣ ದಾಖಲಾಗಿದೆ. ಇದರ ಜೊತೆಗೆ ಪ್ರಶಾಂತ್ ತನ್ನ ಸ್ನೇಹಿತರನ್ನು ಬಳಸಿಕೊಂಡು ನನ್ನ ವಿರುದ್ದ ಪತ್ರಿಕಾಗೋಷ್ಠಿಯನ್ನು ನಡೆಸಿದ್ದಾರೆ ಎಂದರು.

Leave a Reply

Your email address will not be published. Required fields are marked *

error: Content is protected !!