ಜು.23ರಂದು ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್, ಮ್ಯಾಕ್ಸಿಕ್ಯಾಬ್ ಸಂಘದಿಂದ ಪ್ರತಿಭಟನೆ
ಉಡುಪಿ, ಜು.22: ಟೂರಿಸ್ಟ್ ವಾಹನಗಳಿಗೆ ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್ ಅಳವಡಿಕೆಯನ್ನು ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ವತಿಯಿಂದ ಮಂಗಳವಾರ ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಬಳಿ ಬೃಹತ್ ಪ್ರತಿ ಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಜಿ.ಕೋಟ್ಯಾನ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಾರಿಗೆ ಇಲಾಖೆಯ ಆದೇಶದಂತೆ ರಾಜ್ಯ ಸಾರಿಗೆ ಇಲಾಖೆಯು ವಾಣಿಜ್ಯ ವಾಹನಗಳಿಗೆ ಜಿಪಿಎಸ್ ಹಾಗೂ ಪ್ಯಾನಿಕ ಬಟನ್ ಎಂಬ ಸಾಧನಗಳನ್ನು ಅಳವಡಿಸಲು ನೀಡಿರುಎವ ಆದೇಶವು ತೀರಾ ಅವೈಜ್ಞಾನಿಕವಾಗಿದೆ ಎಂದರು.
ಇದು ರಾಜ್ಯದ ಎಲ್ಲಾ ವಾಣಿಜ್ಯ ವಾಹನಗಳು ಹಾಗೂ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕ-ಮಾಲಕರ ಉದ್ಯೋಗದ ಮೇಲೆ ಹೆಚ್ಚುವರಿ ಹೊರೆಯಾಗಿದೆ. ಇದರಿಂದ ಈಗಾಗಲೇ ಸಂಕಷಟದಲ್ಲಿರುವ ರಾಜ್ಯದ ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕ-ಮಾಲಕರು ತೀರಾ ತೊಂದರೆ ಅನುಭವಿಸುವಂತಾಗಿದೆ ಎಂದು ರಮೇಶ್ ಕೋಟ್ಯಾನ್ ತಿಳಿಸಿದರು.
ಪ್ರಸ್ತುತ ವೈಟ್ ಬೋರ್ಡ್ ವಾಹನಗಳು ಸಾವಿರಾರು ಸಂಖ್ಯೆಯಲ್ಲಿ ಅಕ್ರಮವಾಗಿ ಬಾಡಿಗೆ ಮಾಡುತ್ತಿರುವುದ ರಿಂದ ಉದ್ಯಮವು ತೀರಾ ಸಂಕಷ್ಟಕ್ಕೆ ಸಿಲುಕಿದೆ. ಅದರ ಮೇಲೆ ದುಬಾರಿ ತೆರಿಗೆ, ಸ್ಪೀಡ್ ಗವರ್ನರ್, ದುಬಾರಿ ಇನ್ಸೂರೆನ್ಸ್, ಟೋಲ್, ಇಂಧನ ಬೆಲೆ ಏರಿಕೆ ಮುಂತಾದ ಸರಕಾರಿ ವೆಚ್ಚಗಳನ್ನು ಸಹಿಸಿಕೊಂಡು ನಾವು ಇದ್ದೇವೆ. ಆದರೆ ಪ್ರತಿ ವರ್ಷ ನಮ್ಮ ಉದ್ಯೋಗದ ಮೇಲೆ ಹೊಸ ಹೊಸ ನಿಯಮಗಳನ್ನು ಹೇರಿ ಇನ್ನಷ್ಟು ಸಂಕಷ್ಟಕ್ಕೆ ಗುರಿ ಮಾಡಲಾ ಗುತ್ತಿದೆ ಎಂದವರು ಆರೋಪಿಸಿದರು.
ದುಬಾರಿ ದರ ವಸೂಲಿ: ಇಂತಹ ಅವೈಜ್ಞಾನಿಕವಾದ ಸಾಧನಗಳನ್ನು ಅಳವಡಿಸಲು ಕೇಂದ್ರ ಸರಕಾರ 7,550ರೂ. ದರ ನಿಗದಿಪಡಿಸಿದೆ. ಆದರೆ ರಾಜ್ಯದ ಎಲ್ಲಾ ಸಾರಿಗೆ ಕಚೇರಿಗಳಲ್ಲಿ ಈ ಸಾಧನ ಅಳವಡಿಸಲು 13,000ರೂ.ನಿಂದ 15,000 ರೂ.ವರೆಗೆ ದುಬಾರಿ ದರವನ್ನು ವಸೂಲಿ ಮಾಡಲಾಗುತ್ತಿದೆ. ಇದರ ವಿರುದ್ಧ ನಾಳೆ ಇಡೀ ರಾಜ್ಯಾದ್ಯಂತ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ ಎಂದು ರಮೇಶ್ ಕೋಟ್ಯಾನ್ ಹೇಳಿದರು.
ಮುಂದಿನ ಸೆಪ್ಟಂಬರ್ ತಿಂಗಳವರೆಗೆ ಪ್ರವಾಸಿ ವಾಹನಗಳಿಗೆ ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್‌ಗಳನ್ನು ಅಳವಿಡಸದೇ ಎಫ್‌ಸಿ ಮಾಡಬಹುದು ಎಂದು ರಾಜ್ಯ ಸಾರಿಗೆ ಸಚಿವರು ತಿಳಿಸಿದ್ದರೂ, ಇಲಾಖೆಯ ಅಧಿಕಾರಿಗಳು ಸಚಿವರ ಆದೇಶವನ್ನು ನಿರ್ಲಕ್ಷ್ಯಿಸಿ ತರಾತುರಿಯಲ್ಲಿ ಎಫ್‌ಸಿ ಮಾಡಲು ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್‌ನ್ನು ದುಬಾರಿ ದರದಲ್ಲಿ ಅಳವಡಿಸುವುದನ್ನು ಕಡ್ಡಾಯಗೊಳಿಸಿದ್ದಾರೆ ಎಂದರು.
ಇವುಗಳನ್ನೆಲ್ಲಾ ವಿರೋಧಿಸಿ ಸಂಸ್ಥೆಯ ಅಧ್ಯಕ್ಷರಾದ ಮಾಜಿ ಶಾಸಕ ಕೆ.ರಘುಪತಿ ಭಟ್ ಅವರ ನೇತೃತ್ವದಲ್ಲಿ ಹಾಗೂ ಜಿಲ್ಲೆಯ ಸಮಸ್ತ ಪ್ರವಾಸಿ ವಾಹನ ಚಾಲಕ-ಮಾಲಕರ ಸಹಭಾಗಿತ್ವದಲ್ಲಿ ನಾಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಕೋಟ್ಯಾನ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಸತೀಶ್ ನಾಯಕ್ ಸಂತೆಕಟ್ಟೆ, ರಾಘವೇಂದ್ರ ಸೋಮಯಾಜಿ, ಪ್ರಕಾಶ್ ಅಡಿಗ, ಕೃಷ್ಣ ಕೋಟ್ಯಾನ್, ವಿಕ್ರಮ ರಾವ್ ಹಾಗೂ ಶರತ್ ಕುಮಾರ್ ಉಪಸ್ಥಿತರಿದ್ದರು.