ಕಾಪು ಶಾಸಕರಿಂದ ಅಭಿವೃದ್ಧಿಯ ಕಡೆ ನಿರ್ಲಕ್ಷ್ಯ- ಅನುದಾನ ಕೊರತೆಯ ಸಬೂಬು: ಸೊರಕೆ
ಕಾಪು: ಈ ಬಾರಿ ರಾಜದೆಲ್ಲೆಡೆ ವಿಪರೀತ ಮಳೆಯಾಗಿದ್ದು, ಕಾಪು ಕ್ಷೇತ್ರದಲ್ಲಿ ಅತಿವೃಷ್ಟಿಯಿಂದಾಗಿ ಬಹುತೇಕ ಎಲ್ಲ ರಸ್ತೆಗಳು, ಮನೆಗಳು ಮತ್ತು ಬೆಳೆ ಹಾನಿಯಾಗಿದ್ದು, ಸ್ಥಳೀಯಾಡಳಿತ ವ್ಯವಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಮರೋಪಾದಿ ಯಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡು, ಸರ್ಕಾರದಿಂದ ಪ್ರಕೃತಿ ವಿಕೋಪ ನಿಧಿಯಿಂದ ಸೂಕ್ತ ಪರಿಹಾರ ದೊರಕಿಸಿಕೊಡುವ ಕಾರ್ಯ ಕೈಗೊಂಡಿರುವುದು ಶ್ಲಾಘನೀಯ.
ಆದರೆ ಜನರಿಂದ ಚುನಾಯಿತರಾದ ಕಾಪು ಕ್ಷೇತ್ರದ ಶಾಸಕರು ಮಾತ್ರ ಇಷ್ಟರವರೆಗೆ ಯಾವುದೇ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಆಸಕ್ತಿ ವಹಿಸದೆ ನಿರ್ಲಕ್ಷ್ಯ ತೋರಿರುವುದು ವಿಷಾದನೀಯ. ಯಾವುದೇ ಅಭಿವೃದ್ಧಿ ಯೋಜನೆ ಅಥವಾ ಕಾಮಗಾರಿಗಳ ಬಗ್ಗೆ ಮಾತೆತ್ತಿದರೆ ಅದೇ ರೆಡಿಮೇಡ್ ಉತ್ತರ… “ನನಗೆ ಅನುದಾನ ಸಿಗುತ್ತಿಲ್ಲ” ಎಂಬುದು. ಕ್ಷೇತ್ರದ ಅಭಿವೃದ್ಧಿ ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲರಾಗಿರುವ ಶಾಸಕರು ಅನುದಾನದ ಕೊರತೆಯ ಸಬೂಬು ಹೇಳಿ ಜವಾಬ್ದಾರಿಯಿಂದ ನುಣುಚಿ ಕೊಳ್ಳುವುದು ಹಾಸ್ಯಾಸ್ಪದ ಎಂದು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು ಹೇಳಿದರು.
ಇಂದು ಕಾಪು – ರಾಜೀವ್ ಭವನ ದಲ್ಲಿ ನಡೆದ, ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ಇದರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ, ಅಭಿವೃದ್ದಿ ಪರ ಕಿಂಚಿತ್ತೂ ಚಿಂತನೆಯಿಲ್ಲದ ಬಿಜೆಪಿಯವರಿಗೆ ನಕಲಿ ಹಿಂದುತ್ವವೊಂದೇ ಮತಗಳಿಸಲು ಬಂಡವಾಳವಾಗಿ ತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಮ ಮಂದಿರವನ್ನು ಮುನ್ನೆಲೆಗೆ ತಂದು ಮತ ಬಾಚುವ ಅವರ ಲೆಕ್ಕಾಚಾರ ತಲೆಕೆಳಗಾಗಿ, ರಾಮ ಮಂದಿರ ಇರುವ ಅಯೋಧ್ಯೆಯಲ್ಲಿಯೇ ಸೋಲುಣ್ಣುವ ಮೂಲಕ ಮುಖಭಂಗಕ್ಕೀಡಾಗಿರುವುದು ನೈಜ ಹಿಂದೂಗಳು ಬಿಜೆಪಿಗರ ನಕಲಿ ಹಿಂದುತ್ವ ವನ್ನು ತಿರಸ್ಕರಿಸಿದ್ದಾರೆ ಎನ್ನುವುದು ಋಜುವಾತಾಗಿದೆ.
ಅಧಿಕಾರ ಸಿಕ್ಕಾಗ ಭ್ರಷ್ಟಾಚಾರವೊಂದೇ ನಮ್ಮ ಜನ್ಮ ಸಿದ್ಧ ಹಕ್ಕು ಎಂಬಂತೆ, ದುರಾಡಳಿತ ನಡೆಸಿ ಇದೀಗ ಸತ್ಯ ಹರಿಶ್ಚಂದ್ರ ರಂತೆ ನಟಿಸುವುದು, ದೆವ್ವದ ಕೈಯಲ್ಲಿ ಭಗವದ್ಗೀತೆ ಎಂಬಂತಾಗಿದೆ. ಬಿ.ಜೆ.ಪಿ ಸರ್ಕಾರದ ಆಡಳಿತಾವಾಧಿಯಲ್ಲಿ ನಡೆದಿರುವ ಎಲ್ಲ ಹಗರಣಗಳನ್ನು ನಮ್ಮ ಸರ್ಕಾರ ಬಯಲಿಗೆಳೆದು, ವಿಶೇಷವಾಗಿ ಉಡುಪಿ ಜಿಲ್ಲೆಯಲ್ಲಿ ನಡೆದಿರುವ ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಹಗರಣ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಹಗರಣ, ನಂದಿಕೂರು ಸುಜ್ಲಾನ್ ಕೈಗಾರಿಕಾ ವಲಯದಲ್ಲಿ ನಡೆದಿರುವ ಅವ್ಯವಹಾರ ಇವೆಲ್ಲವುಗಳನ್ನು ತನಿಖೆಗೊಳಪಡಿಸಿ, ಅಕ್ರಮವೆಸಗಿದವರನ್ನು ತಕ್ಕ ಶಿಕ್ಷೆಗೊಳಪಡಿಸುವುದು ಶತಹಸಿದ್ಧ ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಬ್ಲಾಕ್ ಸಮಿತಿ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಪಕ್ಷ ಸಂಘಟನೆಯ ಬಗ್ಗೆ ಕೆ. ಪಿ.ಸಿ.ಸಿ ನೀಡಿರುವ ಸೂಚನೆಗಳನ್ನು ವಿವರಿಸಿ ಹೇಳಿದರು. ಈ ಸಂದರ್ಭದಲ್ಲಿ, ಕಟಪಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಗೆ ನೂತನವಾಗಿ ನೇಮಕಗೊಂಡ ಮಹೇಶ್ ಪೂಜಾರಿಯವರು ನೇಮಕಾತಿ ಆದೇಶ ನೀಡಿ ಅಭಿನಂದಿಸಲಾಯಿತು. ಇತ್ತೀಚೆಗೆ ನಿಧನರಾದ ಹಿರಿಯ ಕಾಂಗ್ರೆಸ್ ಮುಖಂಡರು ಹಾಗೂ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ದೇಜು ಪೂಜಾರಿ ಮೂಳೂರು ಇವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭೆಯಲ್ಲಿ ಕಾಪು ದಿವಾಕರ್ ಶೆಟ್ಟಿ, ಶಿವಾಜಿ ಸುವರ್ಣ ಬೆಳ್ಳೆ, ವಿಕ್ರಂ ಕಾಪು, ಶರ್ಫುದ್ದೀನ್ ಶೇಖ್, ಗೀತಾ ವಾಗ್ಲೇ, ವಿನಯ್ ಬಲ್ಲಾಳ್, ಪ್ರಶಾಂತ್ ಜತ್ತನ್ನ, ರಾಜೇಶ್ ರಾವ್, ಹಸನಬ್ಬ ಶೇಖ್, ನವೀನ್ ಎನ್. ಶೆಟ್ಟಿ, ರಮೀಜ್ ಹುಸೇನ್, ಕೆ. ಎಚ್. ಉಸ್ಮಾನ್, ಅಶೋಕ್ ನಾಯರಿ ಮತ್ತಿತರ ಪ್ರಮುಖರು ಹಾಗೂ ವಿವಿಧ ಮುಂಚೂಣಿ ಘಟಕ ಮತ್ತು ಇತರೆ ಘಟಕ , ವಿಭಾಗಗಳ ಅಧ್ಯಕ್ಷರು, ಗ್ರಾಮೀಣ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರು, ಬೂತ್ ಸಮಿತಿ ಅಧ್ಯಕ್ಷರು, ಬಿ. ಎಲ್.ಎ -2 ಗಳು, ವಿವಿಧ ಸ್ತರದ ಸ್ಥಳೀಯಾಡಳಿತ ಸಂಸ್ಥೆಗಳ ಹಾಲಿ ಹಾಗೂ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮೀರ್ ಮೊಹಮ್ಮದ್ ಸ್ವಾಗತಿಸಿದರು, ಸುನೀಲ್ ಡಿ. ಬಂಗೇರ ಧನ್ಯವಾದವಿತ್ತರು.